ಮಕ್ಕಳು ವಿದ್ಯಾವಂತರಾದರೆ ಬಡತನ ನಿರ್ಮೂಲನೆ
ಕ.ಪ್ರ.ವಾರ್ತೆ ಟಿ ನೆಲಮಂಗಲ ಟಿ ಆ.11
ಸಮಾಜದಲ್ಲಿ ಬಡತನ ನಿರ್ಮೂಲನೆಯಾಗಬೇಕಾದರೆ ಮಕ್ಕಳು ವಿದ್ಯಾವಂತರಾದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಟಿ.ಬೇಗೂರು ಜಿ.ಪಂ.ಸದಸ್ಯ ಬಿ.ಎಂ.ಎಲ್. ಕಾಂತರಾಜು ಹೇಳಿದರು. ಅವರು ಭಾನುವಾರ ತಾಲೂಕಿನ ಯಲಚಗೆರೆ ಗ್ರಾಮದಲ್ಲಿ ಶ್ರೀ ಮುನೇಶ್ವರಸ್ವಾಮಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಸರ್ಕಾರಿ ಶಾಲೆಯ 150 ಜನ ವಿದ್ಯಾರ್ಥಿಗಳಿಗೆ ದಾನಿಗಳಾದ ಹೊಯ್ಸಳಸೇನೆ ಹನುಮಂತರಾಜು ನೀಡಿದ ಉಚಿತ ಸಮವಸ್ತ್ರ ವಿತರಿಸಿ ಮಾತನಾಡುತ್ತಾ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮನೋಭಾವ ಮೂಡಿಸಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಹೊಣೆಗಾರಿಕೆ ಪೋಷಕರು ಹಾಗೂ ಶಿಕ್ಷಕರ ಕರ್ತವ್ಯ ಎಂದು ತಿಳಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಸೌಲಭ್ಯ ಸಮರ್ಪಕವಾಗಿ ಬಳಕೆಯಾದರೆ ವಿದ್ಯಾಭ್ಯಾಸ ಗುಣಮಟ್ಟ ಹೆಚ್ಚುವುದರೊಂದಿಗೆ ಉತ್ತಮ ಜೀವನ ನಿರ್ಮಾಣಕ್ಕೆ ತಳಪಾಯವಾಗುತ್ತದೆ ಎಂದು ಹೊಯ್ಸಳಸೇನೆ ರಾಜ್ಯಾಧ್ಯಕ್ಷ ಬಿ.ಎಸ್.ಕೃಷ್ಣಮೂರ್ತಿ ನುಡಿದರು.
ಬಿ.ಡಿ.ಸಿ.ಸಿ. ಬ್ಯಾಂಕ್ ಮಾಜಿ ಜಿಲ್ಲಾಧ್ಯಕ್ಷ ಬಿ.ಎಸ್.ಕೃಷ್ಣಮೂರ್ತಿ, ಹೊಯ್ಸಳ ಸೇನೆ ಜಿಲ್ಲಾಧ್ಯಕ್ಷ ರಂಗಸ್ವಾಮಿ, ತಾಲ್ಲೂಕು ಅಧ್ಯಕ್ಷ ಹನುಮಂತರಾಜು, ಶಾಲಾ ಮುಖ್ಯ ಶಿಕ್ಷಕ ಬಸಣ್ಣ ಇದ್ದರು.