ಮುತ್ತು ಬಂದಿದೆ ಕೇರಿಗೆ: ಕನಕ ಸಾಹಿತ್ಯ ರಸಗ್ರಹಣ
ಕ.ಪ್ರ.ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಆ.11
ಕನಕದಾಸರ ಜೀವನ ದರ್ಶನ, ಕಾವ್ಯ-ಕೀರ್ತನೆಗಳ ಅನನ್ಯತೆ, ಸಾಮಾಜಿಕ ಚಿಂತನೆಗಳನ್ನು ಕುರಿತಂತೆ ಸಂಶೋಧನೆ, ಅಧ್ಯಯನ ಮತ್ತು ಪ್ರಸಾರ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದೆ. ಪ್ರಸಕ್ತ ಸಾಲಿನಲ್ಲಿ ಕನಕದಾಸರು ಮತ್ತು ಅವರ ಜೀವನ ದರ್ಶನವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಸುವ ಉದ್ದೇಶದಿಂದ ಮುತ್ತು ಬಂದಿದೆ ಕೇರಿಗೆ ಎಂಬ ರಸಗ್ರಹಣ ಶಿಬಿರವನ್ನು ಏರ್ಪಡಿಸುತ್ತಿದೆ ಎಂದು ಸಂಶೋಧನಾ ಕೇಂದ್ರದ
ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ತಿಳಿಸಿದ್ದಾರೆ.
ಎರಡೂವರೆ ಗಂಟೆ ಅವಧಿಯ ಈ ಶಿಬಿರದಲ್ಲಿ ಒಬ್ಬ ವಿದ್ವಾಂಸರು 60 ನಿಮಿಷಗಳ ಕಾಲ ಕನಕದಾಸರು ಮತ್ತು ಅವರ ಕಾರ್ಯ ಕೃತಿಗಳ ಬಗ್ಗೆ ಉಪನ್ಯಾಸ ನೀಡುತ್ತಾರೆ. 90 ನಿಮಿಷಗಳ ಕಾಲ ಸಂಗೀತ ತಂಡವು ಕನಕದಾಸರ ಕಾವ್ಯ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಈ ವಿಶೇಷ ಉಪನ್ಯಾಸ ಮತ್ತು ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಕಾರ್ಯಕ್ರಮ ಯೋಜಿಸಲಾಗಿದೆ.
ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಜಿಲ್ಲೆಗೆ 2 ರಂತೆ ಮುತ್ತು ಬಂದಿದೆ ಕೇರಿಗೆ ರಸಗ್ರಹಣ ಶಿಬಿರ ಏರ್ಪಡಿಸಲಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆ.13ರ ಮಂಗಳವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಉಪನ್ಯಾಸ ನೀಡಲಿದ್ದು, ಡಿ.ಆರ್.ರಾಜಪ್ಪ ಮತ್ತು ತಂಡ ಕೀರ್ತನೆಗಳು ಮತ್ತು ಕಾವ್ಯ ಭಾಗದ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.