ವಿಜಯಪುರದಲ್ಲಿ ಯಶಸ್ವಿಯಾದ ದಂತ ಚಿಕಿತ್ಸಾ ಶಿಬಿರ
ವಿಜಯಪುರ: ಇಲ್ಲಿನ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆ ಆವರಣದಲ್ಲಿ ಎಂ.ಎಸ್. ರಾಮಯ್ಯ ದಂತ ಚಿಕಿತ್ಸಾ ಆಸ್ಪತ್ರೆ ಹಾಗೂ ಸರ್ವ ಶಿಕ್ಷಣ ಅಭಿಯಾನದ ಸಂಯೋಜನೆಯಲ್ಲಿ ದಂತ ಚಿಕಿತ್ಸಾ ಶಿಬಿರ ನಡೆಯಿತು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೋಸ್ಕರ ನಡೆಯುತ್ತಿರುವ ಈ ಕಾರ್ಯಕ್ರಮದಿಂದ ಪ್ರತಿ ದಿನ 150 ಮಂದಿ ಮಕ್ಕಳು ಇದರ ಉಪಯೋಗ ಪಡೆಯುತ್ತಿದ್ದು ಹಿಂದಿನ ಉಪನಿರ್ದೇಶಕ ವೆಂಕಟೇಶಪ್ಪ ಅವರ ಸ್ವಯಂ ಆಸಕ್ತಿಯ ಶ್ರಮದಿಂದ ಶಿಬಿರ ನಡೆಯುತ್ತಿದೆ ಎಂದು ಸಂಪನ್ಮೂಲ ಅಧಿಕಾರಿ ಕಲ್ಪನಾ ಪ್ರೇಮಲತಾ ತಿಳಿಸಿದರು.
ಒಂದನೇ ತರಗತಿ ಮಕ್ಕಳಿಂದ 10ನೇ ತರಗತಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಹಲ್ಲಿಗೆ ಸಂಬಂಧ ಪಟ್ಟ ಎಲ್ಲಾ ಸಮಸ್ಯೆಗಳ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು. ಎಂ.ಎಸ್.ರಾಮಯ್ಯ ದಂತಾ ಚಿಕಿತ್ಸಾ ಆಸ್ಪತ್ರೆಯ ವೈದ್ಯರಾದ ಡಾ.ನವೀನ್ ಮತ್ತು ಡಾ.ಅನಿತಾ ಅವರ ನೇತೃತ್ವದಲ್ಲಿ ಶಿಬಿರ ನಡೆಯುತ್ತಿದ್ದು, ದೇವನಹಳ್ಳಿ ತಾಲೂಕಿನಲ್ಲಿ ಮಾತ್ರ ನಡೆಯುತ್ತಿದೆ. ಇಲ್ಲಿಯ ತನಕ 8 ಶಿಬಿರಗಳಾಗಿದ್ದು ಶಾಲೆಯ ಮಕ್ಕಳು ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಸಮನ್ವಯ ಅಧಿಕಾರಿ ಪ್ರಕಾಶ್ ಭೇಟಿ ನೀಡಿದರು.