ಕಣ್ಣೀರಲ್ಲಿ ಮರುಳು ಮಾಡುವ ಗೌಡರ ತಂತ್ರ ಹುಸಿಗೊಳಿಸಿ
ಚನ್ನಪಟ್ಟಣ: ಪ್ರತಿಯೊಂದು ಚುನಾವಣೆಯೂ ಕೊನೆ ಚುನಾವಣೆ ಎಂದು ಕಣ್ಣೀರು ಸುರಿಸಿ ಮತದಾರನ್ನು ಮರುಳು ಮಾಡುವ ದೇವೇಗೌಡರ ತಂತ್ರವನ್ನು ಹುಸಿಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆನೀಡಿದ್ದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪಕ್ಷದ ಅಭ್ಯರ್ಥಿ ಡಿ.ಕೆ.ಸುರೇಶ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಲು ಈ ಭಾಗದ ಮತದಾರರು ಮನಸ್ಸು ಮಾಡಬೇಕೆಂದು ಮನವಿ ಮಾಡಿದರು.
ಈ ಭಾಗದ ಮತದಾರರ ಅಭಿಮಾನವನ್ನು ಬಳಸಿ ಕೊಂಡು ಎನೆಲ್ಲಾ ಅಧಿಕಾರವನ್ನು ಅನುಭವಿಸಿರುವ ಅಪ್ಪಮಕ್ಕಳು ಈಕ್ಷೇತ್ರದ ಅಭಿವೃದ್ಧಿಗೆ ಕನಿಷ್ಠ ಕಾಳಜಿಯನ್ನೂ ತೋರಿಲ್ಲ, ಯಾವುದೇ ಕಾರಣಕ್ಕೂ ಇವರ ಮೊಸಳೆ ಕಣ್ಣೀರಿಗೆ ಬಲಿಯಾಗದೆ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ಕರೆ ನೀಡಿದರು.
ಜೆಡಿಎಸ್ಗೆ ನೈತಿಕತೆ ಇಲ್ಲ: ಜಾತ್ಯತೀತರು ಎಂದು ಹಣೆ ಪಟ್ಟಿ ಅಂಟಿಸಿಕೊಂಡಿರುವ ಜೆಡಿಎಸ್ ಬಿಜೆಪಿಯಂತಹ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ತನ್ನ ಹುಸಿ ಜಾತ್ಯತೀತೆಯ ಮುಖವಾಡ ಕಳಚಿದೆ, ಅಧಿಕಾರಕ್ಕಾಗಿ ತತ್ವ ಸಿದ್ಧಾಂತಗಳನ್ನು ಮಣ್ಣು ಪಾಲು ಮಾಡಲು ಸಿದ್ಧವಿರುವ ಅಪ್ಪಮಕ್ಕಳಂತಹ ಅವಕಾಶವಾದಿಗಳಿಗೆ ಕ್ಷೇತ್ರದ ಜನತೆಯೇ ಬುದ್ಧಿ ಹೇಳಬೇಕೆಂದರು.
ಪ್ರತಿಯೊಂದು ಚುನಾವಣೆಯಲ್ಲೂ ಇಲ್ಲಸಲ್ಲದ ನೆಪ ಹೂಡಿ ಮತದಾರರನ್ನು ಮರಳು ಮಾಡುವ ಜೆಡಿಎಸ್ ರಾಜ್ಯದಲ್ಲಿ ತಾವೇ ಅಧಿಕಾರ ನಡೆಸಬೇಕು ಎಂಬ ದುರುದ್ದೇಶ ಹೊಂದಿದ್ದಾರೆ. ಜನತೆ ಇದಕ್ಕೆ ತಕ್ಕ ಪಾಠ ಕಲಿಸಬೇಕೆಂದರು.
ಅಧಿಕಾರ ದಾಹಕ್ಕಾಗಿ ತಹತಹಿಸುತ್ತಿರುವ ಅಪ್ಪಮಕ್ಕಳು ಯಾವ ಮಟ್ಟಿಗೆ ಬೇಕಾದರೂ ಇಳಿಯುತ್ತಾರೆ. ರಾಜಕೀಯ ನೈತಿಕತೆಯನ್ನು ಹಾಳು ಮಾಡುತ್ತಿರುವ ಜೆಡಿಎಸ್ ಕೊನೆಗಾಣಿಸಲು ಮತದಾರರು ನಮ್ಮ ಜತೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಹಿಂದುಳಿದ ವರ್ಗಗಳ ಸಾಲ ಮನ್ನಾ, ಹೈನುಗಾರಿಕೆಗೆ ಪ್ರೋತ್ಸಾಹಧನ ಸೇರಿದಂತೆ ಹತ್ತು ಹಲವು ಕೊಡುಗೆ ನೀಡಿದೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಆಯೋಗ ರಚನೆ ಮಾಡಲಾಗುತ್ತಿದೆ. ಬೆಲೆ ಬಿದ್ದರೆ ನೇರವಾಗಿ ಸರ್ಕಾರವೇ ರೈತರಿಂದ ಖರೀದಿ ಮಾಡಲು 1ಸಾವಿರ ಕೋಟಿ ರು. ಆವರ್ತ ನಿಧಿ ಸ್ಥಾಪಿಸಿದೆ. ಬೆಳೆ ನಾಶವಾದರೆ ಪರಿಹಾರ ನೀಡಲು ವಿಕೋಪ ಪರಿಹಾರ ನಿಧಿ ಸ್ಥಾಪಿಸಲಾಗಿದೆ ಇಂತಹ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ಸ್ರ್ಕಾರ ಮುಂದಾಗಿದ್ದು ಕೇಂದ್ರ ಮತ್ತು ರಾಜ್ಯದಲ್ಲಿ ಸುಸ್ಥಿರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಬೆಂಬಲಿಸಿ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ಸದಾಕಾಲ ಜನರ ಕೆಲಸ ಕಾರ್ಯಗಳಿಗೆ ತುಡಿಯುವ ಸುರೇಶ್ರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಮತದಾರರು ಅವರ ಸೇವೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಅವಿನಾಭಾವ ಸಂಬಂಧ: ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ವಿರುಪಾಕ್ಷಿಪುರ ಹೋಬಳಿ ಭಾಗದ ಜನತೆಗೂ ನಮಗೂ ಅವಿನಾಭಾವ ಸಂಬಂಧವಿದೆ, ಜೆಡಿಎಸ್ಗೆ ಈ ಹಿಂದೆ ಹಲವು ಬಾರಿ ಅವಕಾಶ ಕೊಟ್ಟಿದ್ದೀರಿ, ಈ ಬಾರಿ ನಮಗೂ ಅವಕಾಶ ಕೊಡಿ, ನಿಮ್ಮ ಋಣವನ್ನು ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ನನ್ನ ಸಹೋದರ ಡಿ.ಕೆ.ಸುರೇಶ್ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿ ಹಾಕಿರಲಿಲ್ಲ, ಇದು ಪಕ್ಷದ ವರಿಷ್ಠರ ನಿರ್ಧಾರ ಎಂದ ಅವರು, ಸುರೇಶ್ ಅವರನ್ನು ಗೆಲ್ಲಿಸಿಕೊಟ್ಟರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ದುಡಿಯುವುದಾಗಿ ಅವರು ತಿಳಿಸಿದರು.
ಸಚಿವ ಮಹದೇವ ಪ್ರಸಾದ್, ಮುಖಂಡ ಸಿ.ಎಂ.ಇಬ್ರಾಹಿಂ, ವೀರಣ್ಣ ಮತ್ತೀಕಟ್ಟಿ, ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಮಾಜಿ ಸಚಿವೆ ಮೋಟಮ್ಮ, ಶಾಸಕ ನರೇಂದ್ರಸ್ವಾಮಿ, ಮಾಜಿ ಶಾಸಕ ಶಿವರಾಮೇಗೌಡ, ರಘುನಂದನ್ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ಶಿವಮಾದು, ಮುಖಂಡ ಭಗತ್ರಾಂ, ಪಿ.ಡಿ.ರಾಜು ಮುಂತಾದವರು ಉಪಸ್ಥಿತರಿದ್ದರು.