ಕಾಂಗ್ರೆಸ್ ಗೆಲವಿಗೆ ಸಹಕರಿಸಿ: ಸಚಿವ ರಾಮಲಿಂಗಾರೆಡ್ಡಿ
ಕನ್ನಡಪ್ರಭಾ ವಾರ್ತೆ, ಆನೇಕಲ್ಲು.ಆ.12
ಕ್ಷೇತ್ರದ ಜನತೆ ಅಧಿಕಾರ ನೀಡಿದರೂ ಅವರು ಸಮಸ್ಯೆಗಳಿಗೆ ಸ್ಪಂದಿಸದ ಜೆಡಿಎಸ್ನಿಂದ ಅನಾವಶ್ಯಕವಾಗಿ ಚುನಾವಣೆ ಎದುರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದರು.
ತಾಲೂಕಿನ ಮುಗಳೂರಿನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಮನಗರ ತಾಲೂಕನ್ನು ಹೊರತು ಪಡಿಸಿ ಉಳಿದ ತಾಲೂಕುಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲೂ ಕುಮಾರಸ್ವಾಮಿ ಅವರು ಬಹುತೇಕ ಪಾಲ್ಗೊಂಡಿಲ್ಲ. ಮಧುಗಿರಿ ಕ್ಷೇತ್ರದ ಶಾಸಕಿಯಾಗಿ ಚುನಾಯಿತರಾಗಿದ್ದ ಅನಿತಾ ಕುಮಾರಸ್ವಾಮಿ ಅವರು ಸಹ ತಮ್ಮ ಕ್ಷೇತ್ರದ ಕಡೆ ಗಮನ ಹರಿಸದೆ ಸಂಪೂರ್ಣ ರ್ನಿಲಕ್ಷಿಸಿದ್ದರು ಎಂದು ಆರೋಪಿಸಿದರು.
ಇದೀಗ ಗ್ರಾಮಾಂತರ ಲೋಕ ಸಭಾ ಕ್ಷೇತ್ರದ ಉಪ ಚುನಾವಣೆಯಸಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಂತಹ ಮನೋಭಾವನೆ ಉಳ್ಳವರಿಗೆ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುವ ಜೆಡಿಎಸ್ ಕೋಮುವಾದಿ ಬಿಜೆಪಿಯೊಂದಿಗೆ ಬಹಿರಂಗವಾಗಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಜಾತ್ಯತೀತ ತತ್ವಗಳಿಗೆ ಸಂಪೂರ್ಣ ತಿಲಾಂಜಲಿ ನೀಡಿದೆ ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿರವರಿಂದ ಉಪ ಚುನಾವಣೆ ಬಂದಿದೆ. ಪದೇ ಪದೇ ಚುನಾವಣೆ ಕಾರಣವಾಗಿ ಜನತೆಯ ತೀರ್ಪನ್ನು ದಿಕ್ಕರಿಸಿ ಸರ್ಕಾರದ ಹಣ ಪೋಲು ಮಾಡುತ್ತಿರುವ ಜೆಡಿಎಸ್ಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದರು. ಮುಗಳೂರು ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಆನೇಕಲ್ಲು ವಿಧಾನ ಸಭಾ ಕ್ಷೇತ್ರದಲ್ಲಿ ಟುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ದೊಮ್ಮಸಂದ್ರ ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರಭಾಕರರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಚಂದ್ರಪ್ಪ, ಕೆ.ರಾಜಣ್ಣ, ಬಿಬಿಎಂಪಿ ಸದಸ್ಯ ಉದಯ್ಶುಂಕರ್, ಕಾಂಗ್ರೆಸ್ ಮುಖಂಡರಾದ ತ್ಯಾವಕನ ಹಳ್ಳಿ ಚಂದ್ರಶೇಖರ್, ಪಟಾಪಟ್ ನಾಗರಾಜ್, ಸರ್ಜಾಪುರ ಶ್ರೀರಾಮುಲು, ಸೋಮಶೇಖರರೆಡ್ಡಿ, ಬಳ್ಳೂರು ನಾರಾಯಣಸ್ವಾಮಿ, ಸುನಂದಾರೆಡ್ಡಿ, ಸುಶೀಲಮ್ಮ, ಚಂದಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗವೇಣಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಧಾಪ್ರಸಾದ್ ಸೇರಿದಂತೆ ಮತಿತರರು ಹಾಜರಿದ್ದರು.