ಕಾಂಗ್ರೆಸ್ ಸೇರಿದ ಎಂ.ವರದೇಗೌಡರ ಕುಟುಂಬ
ಚನ್ನಪಟ್ಟಣ: ಜೆಡಿಎಸ್‌ನ ಅತೃಪ್ತ ಮುಖಂಡರನ್ನು ಸೆಳೆಯಲು ಕಾಂಗ್ರೆಸ್ ಆಪರೇಷನ್ ಆರಂಭಿಸಿದ್ದು ಮಾಜಿ ಸಚಿವ ಎಂ.ವರದೇಗೌಡರ ಕುಟುಂಬ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡಿದೆ.
ಸೋಮುವಾರ ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವರದೇಗೌಡರ ನಿವಾಸಕ್ಕೆ ತೆರಳಿ ಅವರ ಕುಟುಂಬವನ್ನು ಕಾಂಗ್ರೆಸ್‌ಗೆ ಪಕ್ಷಾಂತರ ಗೊಳಿಸುವಲ್ಲಿ ಸಫಲ ಗೊಂಡಿದ್ದಾರೆ. ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ವರದೇಗೌಡರ ಪುತ್ರರಾದ ಜಯಚಂದ್ರ, ಮಾಸ್ತೀಗೌಡ ಸೇರಿದಂತೆ ಗೌಡರ ಕುಟುಂಬದ ಹತ್ತಿರದ ಸಂಬಂಧಿಗಳು ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡಿದ್ದಾರೆ. ಆ.14 ರಂದು ಬೆಂಬಲಿಗರ ಸಭೆ ನಡೆಸಿ ಮತ್ತಷ್ಟು ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಹೋಗಲು ವರದೇಗೌಡರ ಕುಟುಂಬ ನಿರ್ಧರಿಸಿದ್ದು ಇದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.
ರಾತ್ರಿ ಕಾರ್ಯಾಚರಣೆ: ಶಾಸಕ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ವರದೇಗೌಡರ ಪುತ್ರ ಮಾಸ್ತೀಗೌಡ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್‌ಗೆ ಕರೆತರಲು ಆಪರೇಷನ್ ಆರಂಭಿಸಿದ್ದು, ಸೋಮುವಾರ ರಾತ್ರಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ವಾಸೀಲ್ ಆಲಿಖಾನ್ ಸೇರಿದಂತೆ ಕೆಲ ಮುಖಂಡರ ಮನೆಗೆ ಕರೆದುಕೊಂಡು ಹೋಗಿದ್ದಾಗಿ ತಿಳಿದು ಬಂದಿದೆ.
ಅಶ್ವತ್ಥ್ ಆಗಮನ ಕಾರಣವೇ: ವರದೇಗೌಡರ ಕುಟುಂಬ ಜೆಡಿಎಸ್‌ಗೆ ಮತ್ತೆ ಗುಡ್ ಬೈ ಹೇಳಲು ಮಾಜಿ ಶಾಸಕ ಅಶ್ವತ್ಥ್‌ರನ್ನು ಜೆಡಿಎಸ್‌ಗೆ ಕರೆತಂದಿರುವುದೇ ಕಾರಣ ಎಂದು ವಿವರಣೆ ನೀಡಲಾಗುತ್ತಿದೆ. ಈ ಹಿಂದೆ ಅಶ್ವತ್ ಗೆ ಟಿಕೆಟ್ ನೀಡಿದ್ದರಿಂದ ಕುಪಿತಗೊಂಡ ವರದೇಗೌಡರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವ ಮೂಲಕ ಜೆಡಿಎಸ್‌ಗೆ ಸೆಡ್ಡು ಹೊಡೆದಿದ್ದರು. ಅದಾದ ನಂತರ ವರದೇಗೌಡರನ್ನು ಕುಮಾರಸ್ವಾಮಿ ಜೆಡಿಎಸ್‌ಗೆ ಕರೆತಂದರಾದರೂ ಅಶ್ವತ್ಥ್ ಪರ ಪ್ರಚಾರ ನಡೆಸದೇ ಮೌನಕ್ಕೆ ಶರಣಾಗಿದ್ದರು.
ಅಶ್ವತ್ಥ್ ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ತೊರೆದ ಬಳಿಕ ಪಕ್ಷದಲ್ಲಿ ಸಕ್ರಿಯರಾದ ವರದೇಗೌಡ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಪರ ಪ್ರಚಾರ ನಡೆಸಿ ಅಶ್ವತ್ಥ್ ಕಾರಣದಿಂದ ನಾನು ಪಕ್ಷದಲ್ಲಿ ಸಕ್ರಿಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮಾಜಿ ಸಚಿವ ವರದೇಗೌಡರ ಮತ್ತು ಮಾಜಿ ಶಾಸಕ ಅಶ್ವತ್ಥ್ ಹತ್ತಿರದ ಸಂಬಂಧಿಗಳಾಗಿದ್ದರೂ ಈ ಎರಡೂ ಕುಟುಂಬದ ನಡುವೆ ವೈಮನಸ್ಯವಿರುವುದು ತಾಲೂಕಿಗೆ ಜಗಜ್ಜಾಹೀರಾಗಿರುವ ಸಂಗತಿ. ಇದೇ ವೈಮನಸ್ಯ ವರದೇಗೌಡರ ಕುಟುಂಬದ ಪಕ್ಷಾಂತರಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿಗಳು ನಮ್ಮ ತಂದೆಯ ಸ್ನೇಹಿತರು, ಇಬ್ಬರು ಜೆ.ಎಚ್.ಪಟೇಲ್ ಸಂಪುಟದಲ್ಲಿದ್ದವರು. ನಿಮ್ಮ ತಂದೆಯಂತೆ ನೀವು ನನ್ನ ಜತೆ ಇರಿ ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ನಾವು ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿದ್ದೇವೆ.
ಟಿ ಮಾಸ್ತಿಗೌಡ, ವರದೇಗೌಡರ ಪುತ್ರ