ರೋಗಪೀಡಿತ ಚಾಕಿ; ರೇಷ್ಮೆ ಹುಳುಗಳ ಸಾವು
ರಾಮನಗರ: ರೋಗಪೀಡಿತ ಚಾಕಿ ನೀಡಿದ ಪರಿಣಾಮ 2 ರಿಂದ 3 ದಿನಗಳಲ್ಲಿ ಹಣ್ಣಾಗಿ, ಗೂಡು ಕಟ್ಟಬೇಕಿದ್ದ ರೇಷ್ಮೆ ಹುಳುಗಳು ಸಾರಾಸಗಟಾಗಿ ಸಾವಿಗೀಡಾಗಿವೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಸುಮಾರು ರು.10 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಕನಕಪುರ ಹಾಗೂ ರಾಮನಗರ ತಾಲೂಕು ವ್ಯಾಪ್ತಿಯ ಹುಚ್ಚಮ್ಮನದೊಡ್ಡಿ, ಚೌಕಹಳ್ಳಿ, ಚಿಕ್ಕಬೈರಮಂಗಲ, ಕೈಲಾಂಚ ಇನ್ನಿತರೆ ಗ್ರಾಮಗಳ ರೈತರು ಕಳೆದ ಒಂದು ತಿಂಗಳಿನಿಂದ ಕಷ್ಟಪಟ್ಟು ಸಾಕಿದ್ದ ಸಾವಿರಾರು ಮೊಟ್ಟೆಯ ರೇಷ್ಮೆ ಹುಳುಗಳು ಹಠಾತ್ ಸಾವಿಗೀಡಾಗಿವೆ.
ರೇಷ್ಮೆ ಹುಳುಗಳ ಸಾವಿಗೆ ಕನಕಪುರ ಕೀರಣಗೆರೆ ಚಾಕಿ ಸೆಂಟರ್ನವರು ನೀಡಿದ್ದ ರೋಗಪೀಡಿತ ಚಾಕಿಯೇ ಕಾರಣವಾಗಿದೆ ಎಂದು ಆರೋಪಿಸಿರುವ ರೈತರು ಬೆಳೆ ನಷ್ಟಕ್ಕೆ ಪರಿಹಾರ ನಿಡಬೇಕು ಎಂದು ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಪ್ರತಿಭಟನೆಯ ಹಾದಿ ತುಳಿಯುವ ಎಚ್ಚರಿಕೆ ನೀಡಿದ್ದಾರೆ.
ಎಂಜಿನಿಯರಿಂಗ್ ಪದವೀಧರರಾಗಿರುವ ನವೀನ್ರ 200 ಮೊಟ್ಟೆ ರೇಷ್ಮೆ ಹುಳುಗಳು ಸಾವಿಗೀಡಾಗಿವೆ. ಸತತ ಐದಾರು ರೇಷ್ಮೆ ಬೆಳೆ ನಷ್ಟ ಉಂಟಾಗಿದ್ದು, ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದಾರೆ. ಸರ್ಕಾರ ಸಹಾಯಕ್ಕೆ ಬಾರದಿದ್ದರೆ ಕೃಷಿಯನ್ನೇ ತೊರೆಯುವುದಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆ ಬೆಳೆದು ಮಾರುಕಟ್ಟೆಗೆ ಹೋದರೆ ಅಲ್ಲೂ ಕೂಡ ಲಂಚ ನೀಡಬೇಕಿದೆ. ರಾಮನಗರ, ಶಿಡ್ಲಘಟ್ಟ, ಕೊಳ್ಳೆಗಾಲ, ಕನಕಪುರ, ಚನ್ನಪಟ್ಟಣದ ರೇಷ್ಮೆ ಮಾರುಕಟ್ಟೆಯಲ್ಲಿ ಪಾಸ್ ಬುಕ್ ಎಂಟ್ರಿ ಮಾಡಿಕೊಡಲು ಕನಿಷ್ಠ ರು.500 ಲಂಚ ನೀಡಬೇಕಿದೆ.
ಲಂಚ ನೀಡಿ ಪಾಸ್ ಬುಕ್ ಎಂಟ್ರಿ ಮಾಡಿಕೊಡದಿದ್ದಲ್ಲಿ ಸರ್ಕಾರದಿಂದ ಬರುವ ಸಹಾಯಧನದ ಸೌಲಭ್ಯ ಸಿಗುವುದಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಸ್ಪಂದಿಸಿಲ್ಲ. ಹಾಗಾಗಿ ಲಂಚ ನೀಡುವುದು ಅನಿವಾರ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಲಂಚಬಾಕ ಅಧಿಕಾರಿಗಳಿಂದ ರೈತರನ್ನು ರಕ್ಷಿಸಬೇಕು ಎಂದು ಬೆಳೆ ನಷ್ಟ ಅನುಭವಿಸಿರುವ ಚಿಕ್ಕಪುಟ್ಟಪ್ಪ, ಕೃಷ್ಣಪ್ಪ, ಲೋಕೇಶ್, ಸುರೇಶ್ ಮನವಿ ಮಾಡಿದ್ದಾರೆ.