ಉಪವಿಭಾಗಾಧಿಕಾರಿ ಕಚೇರಿ ಶೀಘ್ರ ದೊಡ್ಡಬಳ್ಳಾಪುರಕ್ಕೆ: ಜಿಲ್ಲಾಧಿಕಾರಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಆ.13
ದೊಡ್ಡಬಳ್ಳಾಪುರ ಉಪವಿಭಾಗದ ಉಪವಿಭಾಗಾಧಿಕಾರಿಗಳ ಕಚೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರವಾಗದ ಹೊರತು ಆ.15ರ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಉಪವಿಭಾಗಾಧಿಕಾರಿಗಳು ಧ್ವಜಾರೋಹಣ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಜೊತೆ ಜಿಲ್ಲಾಧಿಕಾರಿಗಳು ಮಂಗಳವಾರ ಸಮನ್ವಯ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾತುಕತೆ ವೇಳೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಂಕರ್, ದೊಡ್ಡಬಳ್ಳಾಪುರಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿ ಸ್ಥಳಾಂತರಗೊಳ್ಳಬೇಕು ಎಂಬ ಬೇಡಿಕೆ ನ್ಯಾಯಯುತವೇ ಆಗಿದೆ. ಆದರೆ ಈ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಕೂಡ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಜನರ ಒತ್ತಾಯ ಮತ್ತು ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲೇ ದೊಡ್ಡಬಳ್ಳಾಪುರ ಜನರ ಮಹತ್ವಾಕಾಂಕ್ಷೆ ಈಡೇರಲಿದೆ. ಉಪವಿಭಾಗಾಧಿಕಾರಿಗಳ ಕಚೇರಿ ಸ್ಥಳಾಂತರಕ್ಕೆ ಎಲ್ಲ ರೀತಿಯಲ್ಲೂ ಕಾನೂನು ಬದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ಕಚೇರಿ ಸ್ಥಾಪನೆಗೆ 3 ಎಕರೆ ಜಮೀನು ಮಂಜೂರಾಗಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರ ಘೋಷಣೆ ವಿಚಾರದಲ್ಲಿ ಈಗಾಗಲೇ ಜಿಲ್ಲೆ 3 ತಾಲೂಕುಗಳು ಜಿಲ್ಲಾ ಕೇಂದ್ರದ ಒತ್ತಾಯ ಮಾಡಿವೆ. ಹೀಗಾಗಿ ಅರ್ಹತೆ ಮತ್ತು ಅವಕಾಶಗಳನ್ನು ಅಳೆದು-ತೂಗಿ ಸರ್ಕಾರ ನಿರ್ಧಾರ ಮಾಡಲಿದೆ. ಇದು ಸರ್ಕಾರದ ಹಂತದಲ್ಲಿ ಆಗಬೇಕಿರುವ ಕೆಲಸ. ಜಿಲ್ಲಾ ಕೇಂದ್ರ ಜಿಲ್ಲೆಯ ಭೌಗೋಳಿಕ ಪ್ರದೇಶಕ್ಕೆ ವರ್ಗಾವಣೆಯಾಗಬೇಕು ಎಂಬುದಂತೂ ನ್ಯಾಯಯುತ ಬೇಡಿಕೆ. ಸಮಿತಿಯ ಮನವಿ ಪತ್ರಗಳನ್ನು ಈಗಾಗಲೇ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ವಿವರಿಸಿದರು.
ಧ್ವಜಾರೋಹಣಕ್ಕೆ ಅಡ್ಡಿ ಬೇಡ: ಆ.15ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಎಂದಿನಂತೆ ದೊಡ್ಡಬಳ್ಳಾಪುರದಲ್ಲೇ ಉಪವಿಭಾಗಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ. ಉಪವಿಭಾಗಾಧಿಕಾರಿಗಳ ಧ್ವಜಾರೋಹಣಕ್ಕೆ ಅಡ್ಡಿ ಮಾಡುವುದು ಬೇಡ. ಇದು ಕಾನೂನು ವಿರೋಧಿ ಕೆಲಸವಾಗಲಿದೆ. ಬೇಡಿಕೆ ಈಡೇರಿಸುವ ಸ್ಪಷ್ಟ ಭರವಸೆ ದೊರೆತಿರುವುದರಿಂದ ಎಲ್ಲ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಆದರೆ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಸಲಹೆಯನ್ನು ಪರಿಶೀಲಿಸಿ, ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ. ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಎನ್.ಹನುಮಂತೇಗೌಡ, ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಂಚಾಲಕ ರಾಜೇಂದ್ರಕುಮಾರ್ ಮತ್ತಿತರರು ಮಾತನಾಡಿದರು.