ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉಭಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ನಿಶ್ಚಿತ

Rashmi Kasaragodu
Updated On : 14 Aug 2013, 12:43 pm

ಕ.ಪ್ರ.ವಾರ್ತೆ    ರಾಮನಗರ    ಆ.13
ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿಯ ಅಪವಿತ್ರ ಮೈತ್ರಿ ಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಾಗದು. ಲೋಕಸಭೆಗೆ ಮರು ಚುನಾವಣೆ ನಡೆಯುತ್ತಿರುವ ಉಭಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರಳವಾಡಿ, ಹಾರೋಹಳ್ಳಿ, ಬಿಡದಿ, ರಾಮನಗರ, ಮಾಗಡಿಯಲ್ಲಿ ಮಂಗಳವಾರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳದು ಅವಕಾಶವಾದಿ ರಾಜಕಾರಣ ಎಂದು ಟೀಕಿಸಿದರು.
ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜನಪರ ಕಾರ್ಯಕ್ರಮಗಳೊಂದಿಗೆ ಕಾಂಗ್ರೆಸ್ ಸರ್ಕಾರ ಪಡೆದಿರುವ ಜನಪ್ರಿಯತೆಯನ್ನು ಸಹಿಸಲಾಗದೆ ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿ ಒಗ್ಗೂಡಿವೆ. ಈ ಮೈತ್ರಿಗೆ ಯಾವುದೇ ತತ್ವ, ಸಿದ್ಧಾಂತ ಮತ್ತು ಬದ್ಧತೆ ಇಲ್ಲ ಎಂದು ಆರೋಪಿಸಿದರು.
ಇತಿಶ್ರೀ ಹಾಡಲು ಕರೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡೆಸುತ್ತಿರುವ ಡೋಂಗಿ ರಾಜಕಾರಣಕ್ಕೆ ಈ ಭಾಗದ ಜನರೇ ಇತಿಶ್ರೀ ಹಾಡಬೇಕು. ಜೆಡಿಎಸ್ಗೆ ಬಡವರು, ಅಲ್ಪ ಸಂಖ್ಯಾತರು, ಹಿಂದುಳಿದವರು, ದಲಿತರ ಮತ ಕೇಳುವ ಹಕ್ಕಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಂವಿಧಾನ, ಜಾತ್ಯತೀತ ಪದದ ಅರ್ಥವೇ ಗೊತ್ತಿಲ್ಲವೆಂದು ಸದನದಲ್ಲೇ ಹೇಳಿರುವ ಕುಮಾರಸ್ವಾಮಿ ಅವರಿಗೆ ತಿಳಿದಿರೋದು ಅಧಿಕಾರ ಒಂದೇ. ದೇವೇಗೌಡರ ಕುಟುಂಬಕ್ಕೆ ಅಧಿಕಾರವಿಲ್ಲದೆ ರಾಜಕಾರಣ ಮಾಡಲಾಗದು ಎಂದು ಅವರು ಛೇಡಿಸಿದರು.
ಬಿಜೆಪಿ ಕಡು ಭ್ರಷ್ಟ: ಜೆಡಿಎಸ್ ವಚನ ಭ್ರಷ್ಟತೆಯ ಲಾಭದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಡು ಭ್ರಷ್ಟವಾಗಿತ್ತು. ಯಡಿಯೂರಪ್ಪ ಮಾತ್ರವಲ್ಲದೆ ಡಿ.ವಿ.ಸದಾನಂದಗೌಡರ ಅಧಿಕಾರದ ಅವಧಿಯಲ್ಲೂ ಭ್ರಷ್ಟಾಚಾರ ತಾಂಡವಾಡಿತು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬಿಜೆಪಿ ನಾಯಕರು ತಮ್ಮ ಭ್ರಷ್ಟಾಚಾರ, ಕಳಂಕ ಮತ್ತು ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ಮೂಲಕ ರಾಜ್ಯದ ಮಾನ, ಮರ್ಯಾದೆಯನ್ನು ಹರಾಜು ಹಾಕಿದ್ದಾರೆ. ಇಂತಹ ಭ್ರಷ್ಟಾತಿಭ್ರಷ್ಟ ಸರ್ಕಾರವನ್ನು ಇಡೀ ದೇಶವೇ ಕಂಡಿಲ್ಲ ಎಂದು ತಿಳಿಸಿದರು.
ಅಪವಿತ್ರ ಮೈತ್ರಿ: ಕುಮಾರಸ್ವಾಮಿ 20 ತಿಂಗಳ ಆಡಳಿತ ಕೊಟ್ಟಿದ್ದರೆ ರಾಜ್ಯದಲ್ಲಿ ಬಿಜೆಪಿ ಅವರಪ್ಪನಾಣೆಗೂ ಅಧಿಕಾರಕ್ಕೆ ಬರುತ್ತಿರಲಿಲ್ಲ. ಕೆಸರೆರೆಚಾಡಿಕೊಂಡ ಆ ಪಕ್ಷಗಳು ಈಗ ದೋಸ್ತ್ ಆಗಿವೆ. ಇಂತಹ ಅಪವಿತ್ರ ಮೈತ್ರಿಗೆ ಜನತೆ ಯಾವ ಕಾರಣಕ್ಕೂ ಬೆಂಬಲ ನೀಡಬಾರದು ಎಂದು ಅವರು ಮನವಿ ಮಾಡಿದರು.
ಮುಖವಾಡ ಕಳಚಿದೆ: 50 ವರ್ಷದಿಂದ ಜಾತ್ಯತೀತ ನಿಲುವನ್ನೇ ಪ್ರತಿಪಾದಿಸುತ್ತಾ ಬಂದಿದ್ದ ದೇವೇಗೌಡರು ಮರು ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಬೆಂಬಲ ಗಿಟ್ಟಿಸಿದ್ದಾರೆ. ಇದರೊಂದಿಗೆ ಅವರು ಹಾಕಿದ್ದ ಮುಖಡವಾಡ ಕಳಚಿ ಬಿದ್ದಂತಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
2008ರಲ್ಲಿ ಮತ್ತೊಮ್ಮೆ ಅತಂತ್ರ ವಿಧಾನಸಭೆ ಬರಬಹುದೆಂದು ಕುಮಾರಸ್ವಾಮಿ ಶಾಸಕರಾದರು. ಇಲ್ಲಿ ಆಟ ನಡೆಯೋದಿಲ್ಲ ಎಂದಾದಾಗ ಲೋಕಸಭೆಗೆ ಹೋದರು. ಅಲ್ಲಿ ಸಚಿವ ಸ್ಥಾನ ಸಿಗುವ ಕನಸು ನನಸಾಗಲಿಲ್ಲ. ಅದಕ್ಕಾಗಿ ಮತ್ತೆ ವಿಧಾನಸಭೆಗೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.  ಅಧಿಕಾರ ದಾಹದಿಂದ ಕುಮಾರಸ್ವಾಮಿ ನಡೆಸಿದ ಸರ್ಕಸ್ ಪರಿಣಾಮವೇ ಈ ಮರು ಚುನಾವಣೆಯಾಗಿದೆ. ಅಡ್ಜೆಸ್ಟ್ಮೆಂಟ್ ರಾಜಕಾರಣಮೊಂದೇ ಕುಮಾರಸ್ವಾಮಿಯ ಧ್ಯೇಯ. ಅದನ್ನು ಸದನದಲ್ಲಿ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ ಎಂದು ತಿಳಿಸಿದರು. ಪ್ರಚಾರ ಸಭೆಯಲ್ಲಿ ಕೇಂದ್ರದ ಮಾಜಿ ಸಚಿವರಾದ ಸಿ.ಎಂ.ಇಬ್ರಾಹಿಂ, ಜನಾರ್ದನ ಪೂಜಾರಿ, ಸಚಿವರಾದ ಯು.ಟಿ.ಖಾದರ್, ವಿನಯಕುಮಾರ ಸೊರಕೆ, ಕೃಷ್ಣ ಬೈರೇಗೌಡ, ಕೆಪಿವೈಸಿಸಿ ಅಧ್ಯಕ್ಷ ಹರ್ಷದ್ ರಿಜ್ವಾನ್, ಮುಖಂಡರಾದ ಡಿ.ಕೆ.ಶಿವಕುಮಾರ್, ಮೋಟಮ್ಮ, ವಡ್ನಾಳ್ ರಾಜಣ್ಣ, ಪ್ರಕಾಶ್ ರಾಥೋಡ್, ಈಶ್ವರ ಖಂಡ್ರೆ, ಮಹಾಂತೇಶ್ ಕೌಜಲಗಿ, ಸಿ.ಎಂ.ಲಿಂಗಪ್ಪ, ಮರಿದೇವರು, ಎ. ಮಂಜುನಾಥ್ ಮತ್ತಿತರರಿದ್ದರು.




ನನ್ನ ಪದಚ್ಯುತಿಯೇ ಗುರಿ
ಪ್ರಸಕ್ತ ಮರು ಚುನಾವಣೆ ಮತ್ತು ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ, ಕೆಜೆಪಿ ಒಗ್ಗೂಡಿ ಹೋರಾಟ ನಡೆಸಿ ಕಾಂಗ್ರೆಸ್ ಸೋಲಿಸುವ ಮೂಲಕ ನನ್ನನ್ನು ಅಧಿಕಾರದಿಂದ ಇಳಿಸುವ ಗುರಿ ಸಾಧನೆಗೆ ಹೊರಟಿವೆ ಎಂದು ಸಿದ್ದರಾಮಯ್ಯ ಹೇಳಿದರು. ಬಡವರು, ದಲಿತರು, ಅಲ್ಪ ಸಂಖ್ಯಾತರು ಮತ್ತು ರೈತರ ಪರವಾದ ಕಾರ್ಯಕ್ರಮ ಜಾರಿ ಮಾಡಿದ್ದಕ್ಕಾಗಿ ನಾನು ಅಧಿಕಾರದಿಂದ ಕೆಳಗಿಳಿಯಬೇಕೇ ಎಂದು ಬಿಡದಿಯ ಬಹಿರಂಗ ಸಭೆಯಲ್ಲಿ ಪ್ರಶ್ನಿಸಿದ ಅವರು, ಅವಕಾಶವಾದಿ ಮೈತ್ರಿಕೂಟಕ್ಕೆ ಯಾವ ಕಾರಣಕ್ಕೂ ಬೆಂಬಲ ನೀಡಬೇಡಿ ಎಂದರು.


ಸುರೇಶ್ ಇಲ್ಲದಿದ್ರೆ ಡಿಕೆಶಿ ಗೆಲ್ಲೊಲ್ಲ
ಸಾತನೂರು, ಅದಾದ ಬಳಿಕ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಸತತವಾಗಿ ಗೆದ್ದು ಬರುತ್ತಿದ್ದಾರೆ ಅಂದ್ರೆ ಅದು ಡಿ.ಕೆ.ಸುರೇಶ್ ಪ್ರಭಾವ ಮತ್ತು ರಾಜಕೀಯ ಚಾಣಾಕ್ಷತನದಿಂದಷ್ಟೇ ಎಂದು ಸಿದ್ದರಾಮಯ್ಯ ಬಣ್ಣಿಸಿದರು. ಶಿವಕುಮಾರ್ ಸಹೋದರ ಎನ್ನುವ ಕಾರಣದಿಂದ ಸುರೇಶ್ ಅವರಿಗೆ ಟಿಕೆಟ್ ನೀಡಿಲ್ಲ. ಅವರೊಬ್ಬ ನಿಷ್ಠಾವಂತ ಕಾರ್ಯಕರ್ತ ಮತ್ತು ಜನಾನುರಾಗಿ ಎನ್ನುವುದನ್ನು ಗುರುತಿಸಿ, ಪಕ್ಷ ಬಿ ಫಾರಂ ನೀಡಿದೆ. ಇಂತಹ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement