ಕನಕದಾಸರು ಸಾಮಾನ್ಯ ಜನರ ಗಟ್ಟಿದನಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಆ. 13
ತಳಸಮುದಾಯದಲ್ಲಿ ಹುಟ್ಟಿ ಜನರ ನಡುವೆ ನಡೆದಾಡುತ್ತಾ ಅಸಮಾನತೆಯನ್ನು ತೊಲಗಿಸಲು ಶ್ರಮಿಸಿದ ಕನಕದಾಸರು ಜನಸಾಮಾನ್ಯರ ಗಟ್ಟಿದನಿಯಾಗಿದ್ದಾರೆ ಎಂದು ವಿಮರ್ಶಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.
ತಾಲೂಕಿನ ಕನಸವಾಡಿ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮುತ್ತುಬಂದಿದೆ ಕೇರಿಗೆ-ಕನಕದಾಸ ಸಾಹಿತ್ಯ ರಸಗ್ರಹಣ ಶಿಬಿರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಭಾರತದ ಸಾಮಾಜಿಕ ವಾಸ್ತವವಾದ ಜಾತಿ ಅಸಮಾನತೆಯನ್ನು ಹೋಗಲಾಗಿಸಲು ಕನಕರಂತಹ ನೂರಾರು ಸಂತರು ತಮ್ಮ ಜೀವನವಿಡೀ ಶ್ರಮಿಸಿದರು. ಅದರ ಭಾಗವಾಗಿ ಭಕ್ತಿಮಾರ್ಗದ ಮೂಲಕ ಕಾವ್ಯ-ಕೀರ್ತನೆಗಳನ್ನು ರಚಿಸಿ ಜನರ ಮನೆ-ಮನಗಳಲ್ಲಿ ನೆಲೆಸಿದರು. ಅವರ ಬದುಕು, ದರ್ಶನ ನಮ್ಮ ಮೌಲ್ಯವಾದಾಗ ಮಾತ್ರ ಸಮಕಾಲೀನ ತಲ್ಲಣಗಳಿಗೆ ಉತ್ತರ ದೊರೆಯುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯೂ ಸಮರ್ಪಕವಾಗಿ ಮಾಡಲಾರದ ಸಾಮಾಜಿಕ ಪರಿವರ್ತನೆಯನ್ನು ಕನಕರ ಕೀರ್ತನೆಗಳು ಮತ್ತು ತತ್ವಪದಕಾರರ ಹಾಡುಗಳು, ಶರಣರ ವಚನಗಳು ಮಾಡುತ್ತವೆ. ಇಂತಹ ಮೌಲ್ಯಗಳು ಮುದ್ರಣವಿಲ್ಲದ ಕಾಲದಲ್ಲೂ ಜನ ಮಾನಸದಲ್ಲಿ ಉಳಿದು ಬಂದಿವೆ. ಅವುಗಳನ್ನು ಬೆಳೆಸಿಕೊಂಡು ಹೋಗಬೇಕಾದ್ದು ನಮ್ಮ ಜವಾಬ್ದಾರಿಯಾದರೂ, ಯುವಜನತೆ ಪರಂಪರೆಯನ್ನು ಮರೆತಂತೆ ನಟಿಸುತ್ತಿರುವುದು ಆತಂಕಕಾರಿ ಎಂದರು.
ಕೋಲಾರದ ಗಾಯಕ ರಾಜಪ್ಪ ಮತ್ತು ತಂಡದಿಂದ ಕನಕದಾಸರ ಕೀರ್ತನೆಗಳ ಗಾಯನ ನಡೆಯಿತು. ಪ್ರಾಂಶುಪಾಲ ಎಚ್.ಎಸ್.ರಾಜಶೇಖರಯ್ಯ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಡಾ.ವೆಂಕಟಾಚಾರ್, ಪ್ರೌಢಶಾಲಾ ಮುಖ್ಯಸ್ಥ ನಾಗೇಶ್, ಉಪನ್ಯಾಸಕ ಕಂಬಣ್ಣ, ಹನುಮೇಗೌಡ, ಗೋವಿಂದರಾಜು, ವೃಂದಮ್ಮ, ಮಂಗಳ, ಶಿವಕುಮಾರ್, ಮಂಜುಳಾ, ರಾಜಶ್ರೀ ಮತ್ತಿತರರು ಭಾಗವಹಿಸಿದ್ದರು.