'ರೈತರಿಗೆ ಸಾಗುವಳಿ ಚೀಟಿ ನೀಡಿ, ಒಕ್ಕಲೆಬ್ಬಿಸಬೇಡಿ'
ಕ.ಪ್ರ.ವಾರ್ತೆ ಮಾಗಡಿ ಆ.13
ಹಲವಾರು ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸದಂತೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ಗಟ್ಟೀಪುರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ರೈತರು ಹಲವಾರು ವರ್ಷಗಳಿಂದ ಸರ್ಕಾರಿ ಗೋಮಾಳ ಭೂಮಿ ಉಳಿಮೆ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರಿ ಭೂಮಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಸಾಗುವಳಿ ಚೀಟಿ ನೀಡುವಂತೆ ಮನವಿ ಮಾಡಿಕೊಂಡರೂ ಇಲ್ಲಿಯವರೆವಿಗೂ ಸಾಗುವಳಿ ಚೀಟಿ ನೀಡಿಲ್ಲ. ಬಹುರಾಷ್ಟ್ರೀಯ ಕಂಪನಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ರಾಜಕೀಯ ಪುಡಾರಿಗಳಿಗೆ ಸರ್ಕಾರ ಮನ ಬಂದಂದ ಭೂಮಿ ಮಂಜೂರಾತಿ ನೀಡುತ್ತಿದೆ. ಆದರೆ ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿ ಸಾಗುವಳಿ ಮಾಡಿಕೊಂಡು ಬಂದಿದ್ದರೂ ಸಹ ಬಡ ರೈತರಿಗೆ ಭೂಮಿ ಮಂಜೂರಾತಿ ನೀಡಿಲ್ಲ, ಉಳುಮೆ ಚೀಟಿಯೂ ನೀಡಲಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯೆ ಎಸ್.ಜಿ. ವನಜಾ ಆರೋಪಿಸಿದರು.
ಧರಣಿ, ಎಚ್ಚರಿಕೆ: ಕೂಡಲೆ ಉಳಿಮೆ ಚೀಟಿ ನೀಡದಿದ್ದರೆ ಜಿಲ್ಲಾ ಮತ್ತು ತಾಲೂಕಿ ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಸಂಬಂಧ ಮಂಗಳವಾರ ಗಟ್ಟೀಪುರ, ಮರಳುದೇವನಪುರ, ಮತ್ತೀಕೆರೆ, ಮತ್ತೀಕೆರೆ ಕಾಲೋನಿ, ಭೋವಿ ಕಾಲೋನಿ, ಚಕ್ರಭಾವಿ, ಅರಳೀಕಟ್ಟೆದೊಡ್ಡಿ, ಬೆಳಗವಾಡಿ ಇತರೆ ಗ್ರಾಮದ ಮುಖಂಡರೊಂದಿಗೆ ರೈತರೆಲ್ಲರೂ ಒಗ್ಗೂಡಿ ಕರ್ನಾಟಕ ಪ್ರಾಂತ ರೈತ ಸಂಘದ ಮಾರ್ಗದರ್ಶನದಲ್ಲಿ, ಭೂಮಿ ಉಳಿಮೆ ಮಾಡಿದರು. ಕರ್ನಾಟಕ ಪ್ರಾಂತ ರೈತರ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟಾಚಲಯ್ಯ, ಜಿಲ್ಲಾಧ್ಯಕ್ಷ ಎಂ. ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್. ನಾಗೇಶ್, ತಾಲೂಕು ಅಧ್ಯಕ್ಷ ವಿ. ರಾಮಚಂದ್ರ, ಗೌರವಾಧ್ಯಕ್ಷ ವೆಂಕಟೇಶ್, ಖಜಾಂಚಿ ಗಂಗಬೋರಯ್ಯ, ನಾಗರಾಜು, ಸೀಬೇಗೌಡ, ರಮೇಶ್, ಶಿವಪ್ಪ, ಬಸವರಾಜು, ಸುರೇಶ್ ಇತರರು ಇದ್ದರು.
ಸರ್ಕಾರ ಅರಣ್ಯ ಭೂಮಿ ಎಂದು ಘೋಷಿಸಿದೆ. ಉಳಿಮೆ ಮಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತಡೆಯಲು ಪ್ರಯತ್ನಿಸಿದರು. ಆದರೂ ರೈತರು ಉಳಿಮೆ ಮಾಡಿ ಬಿತ್ತನೆ ಮಾಡಿಯೇ ಬಿಟ್ಟರು.
ವಲಯ ಅರಣ್ಯಾಧಿಕಾರಿ ಪ್ರತಿಕ್ರಿಯೆ: ಗಟ್ಟೀಪುರ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 50 ರಲ್ಲಿ 428 ಎಕರೆ, ಮರುಳುದೇವನಪುರ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 25 ರಲ್ಲಿ 212.20 ಎಕರೆ, ಚಕ್ರಭಾವಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 4 ರಲ್ಲಿ 342.20 ಎಕರೆ ಮತ್ತೀಕೆರೆ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 80 ರಲ್ಲಿ 47.20 ಎಕರೆ ಹಾಗೂ ಕೋರಮಂಗಲ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 29 ರಲ್ಲಿ 30 ಎಕರೆ ಸೇರಿ ಒಟ್ಟು 632.20 ಎಕರೆ ಜಮೀನು ಅರಣ್ಯ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಈಗಾಗಲೇ ಸರ್ಕಾರದ ಅನುದಾನ ಬಳಸಿ 250 ಹೆಕ್ಟರ್ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೆ. ನೆಡು ತೋಪು ಸಸಿಗಳನ್ನು ಬೆಳಸಲಾಗಿದೆ. ಆದರೆ ಸಂಘಟನೆಗಳ ಕುಮ್ಮಕ್ಕು ಪಡೆದು ರೈತರು ಅರಣ್ಯ ಇಲಾಖೆ ಬೆಳೆಸಿರುವ ಸಸಿಗಳನ್ನು ನಾಶ ಮಾಡಿ ದಾಂದಲೆ ನಡೆಸಿದ್ದಾರೆ. ಪದೇ ಪದೆ ದಾಳಿಯಿಂದ ಅರಣ್ಯ ಸಸಿಗಳನು ನಾಶವಾಗಿದ್ದು, ಸಾಕಷ್ಟು ನಷ್ಟ ಉಂಟು ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ರೈತರ ವಿರುದ್ಧ ಆರಣ್ಯ ಸಸಿ ನಾಶ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಜತೆಗೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕೆ.ಎನ್. ಕೆಂಪರಾಜು ಪ್ರತಿಕ್ರಿಯಿಸಿದರು.