ಅಸಮರ್ಪಕ ವಿದ್ಯುತ್: ಬೆಸ್ಕಾಂ ಕಚೇರಿಗೆ ಮುತ್ತಿಗೆ- ಪ್ರತಿಭಟನೆ
ನೆಲಮಂಗಲ: ಪಟ್ಟಣದಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆ ಪೂರೈಸುತ್ತಿಲ್ಲ ಎಂದು ನಾಗರಿಕರು ಬೆಸ್ಕಾಂ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಂತಿರುವ ಪಟ್ಟಣದಲ್ಲಿ ಮೂಲ ಸೌಲಭ್ಯಗಳ ಕೊರತೆ ಹೆಚ್ಚಾಗಿದ್ದು ವಿದ್ಯುತ್ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳು ಸಮರ್ಪಕವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೂ ಉರಿ ಬೇಸಿಗೆಯಲ್ಲಿದ್ದ ವಿದ್ಯುತ್ ಕಡಿತದ ವ್ಯವಸ್ಥೆಯನ್ನು ಬೆಸ್ಕಾಂ ಅಧಿಕಾರಿಗಳು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ನೇಕಾರರು ಮತ್ತು ಸಣ್ಣಪುಟ್ಟ ಕೈಗಾರಿಕೆ ನಡೆಸುವವರು ಹೆಚ್ಚಾಗಿದ್ದಾರೆ. ಅಲ್ಲದೆ ವ್ಯಾಪಾರಸ್ಥರಿಗೂ ಸಮರ್ಪಕ ವಿದ್ಯುತ್ ಬೇಕಾಗಿದೆ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರು ಸಂಬಂಧಿಸಿದ ಅಧಿಕಾರಿಗಳಾಗಲೀ ಮತ್ತು ಕ್ಷೇತ್ರದ ಶಾಸಕರಾಗಲಿ ಈ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದಿಂದಲೇ ಬೆಂಗಳೂರಿನ ಅರ್ಧ ಭಾಗಕ್ಕೆ ವಿದ್ಯುತ್ ಸರಬರಾಜು ಮಾಡುವ ಘಟಕ ಇದೆ. ಆದರೂ ಪಟ್ಟಣದ ಜನರಿಗೆ ಮಾತ್ರ ವಿದ್ಯುತನ್ನು ಪೂರ್ಣ ಪ್ರಮಾಣದಲ್ಲಿ ನೀಡುತ್ತಿಲ್ಲ ಎಂದರು.
ಈ ಬಗ್ಗೆ ಬೆಸ್ಕಾಂ ಅಧಿಕಾರಿ ಜಿತೇಂದ್ರ ಅವರನ್ನು ಮಾತನಾಡಿಸಿದಾಗ ಇಲ್ಲಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಲೋಪವಿಲ್ಲ ನಮ್ಮ ಉಪ ಕೇಂದ್ರಕ್ಕೆ ಸರಬರಾಜು ಆಗುವಷ್ಟು ವಿದ್ಯುತ್ ಅನ್ನು ಇಡೀ ತಾಲೂಕಿಗೆ ವಿತರಿಸಬೇಕು ಎಂದರು.
ಪಟ್ಟಣಕ್ಕೆ ಪ್ರತಿ ದಿನಕ್ಕೆ ಕನಿಷ್ಠ ಎಂದರೂ 108 ಮೆಗಾವ್ಯಾಟ್ ವಿದ್ಯುತ್ ಬೇಕಾಗಿ ಸದ್ಯಕ್ಕೆ ನಮಗೆ ನೀಡುತ್ತಿರುವ ಕೇವಲ 40 ಮೆಗಾವ್ಯಾಟ್ ಮಾತ್ರ. ಈ ರೀತಿ ಸರಬರಾಜು ಮಾಡಿದರು ಅಧಿಕಾರಿಗಳಾಗಿ ನಾವು ಮಾಡುವುದಾದರೂ ಏನೂ ನಮಗೆ ಹೆಚ್ಚಿನ ವಿದ್ಯುತ್ ಸರಬರಾಜು ಮಾಡಿದರೆ ಜನರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಇಲಾಖೆ ಸಿದ್ಧವಿದೆ. ಜನ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.