ಆರ್ಪಿಐ ಮುಖಂಡರ ಪಾದಯಾತ್ರೆ: ಬಿರುಸಿನ ಪ್ರಚಾರ
ಕನಕಪುರ: ದೇಶದ ಪ್ರಪ್ರಥಮ ಪ್ರಬಲ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಿದ ರಿಪಬ್ಲಿಕನ್ ಪಾರ್ಟಿ ಆಫ್ಇಂಡಿಯಾ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ರವರ ಕನಸಿನ ಕೂಸು. ಇಂದಿಗೂ ಅಹರ್ನಿಶಿ ಬಡವರ ಪರವಾಗಿ ಚಿಂತಿಸುತ್ತಿರುವ ಏಕೈಕ ರಾಜಕೀಯಪಕ್ಷ ಎಂದು ಆರ್ಪಿಐ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದ್ದಾರೆ. ಅವರು ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದಲ್ಲಿ ಅಭ್ಯರ್ಥಿ ಕುಣಿಗಲ್ ಶಿವಣ್ಣನವರೊಂದಿಗೆ ಪಾದಯಾತ್ರೆ ನಡೆಸುತ್ತಾ ಮತಯಾಚಿಸಿ ಮಾತನಾಡುತ್ತಿದ್ದರು. ಸಮತಾಸೈನಿಕ ದಳದ ಜಿಲ್ಲಾಧ್ಯಕ್ಷ ಜಿ.ಗೋವಿಂದಯ್ಯ ಪಾಲ್ಗೊಂಡಿದ್ದರು. ಅಧಿಕಾರ ದಾಹದಿಂದ ಜೆಡಿಎಸ್ಪಕ್ಷವು ಕೋಮುವಾದಿ ಬಿಜೆಪಿ, ಕೆಜೆಪಿಗಳೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರೆ, ಕಾಂಗ್ರೆಸ್ ಅಧಿಕಾರ ಪಡೆಯುವ ಸಲುವಾಗಿ ಒಳಒಪ್ಪಂದದ ಹಾದಿ ಹಿಡಿದಿದೆ, ಶಾಸಕ ಡಿ.ಕೆ.ಶಿವಕುಮಾರ್ ಮಂತ್ರಿ ಮಾಡಬೇಕಾದರೆ ಅವರ ತಮ್ಮ ಸುರೇಶ್ರವರನ್ನು ಗೆಲ್ಲಿಸಿಕೊಡಿ ಎಂದು ನಿಬಂಧನೆ ವಿಧಿಸಿದ್ದಾರೆ. ಯಾವುದೇ ತತ್ವಸಿದ್ಧಾಂತ ಗಳಿಲ್ಲದೆ ರಾಜಕೀಯ ನಡೆಸುವ ಇತರೇ ಪಕ್ಷಗಳಿಗಿಂತಾ ದೀನದಲಿತರ,ಬಡವರ,ಜನಪರ ಪಕ್ಷವಾದ ಆರ್ಪಿಐ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಉಪಚುನಾವಣೆಯನ್ನು ಮುಂಬರುವ ಮಹಾಚುನಾವಣೆಯ ಮುನ್ಸೂಚನೆಯನ್ನಾಗಿ ಮಾಡಬೇಕೆಂದು ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಹೇಳಿದರು. ಜಿಲ್ಲಾಧ್ಯಕ್ಷ ಗೋವಿಂದಯ್ಯ ಮಾತನಾಡಿದರು. ರಿಪಬ್ಲಿಕನ್ಪಾರ್ಟಿ ರಾಷ್ಟ್ರಾಧ್ಯಕ್ಷ ರಾಮದಾಸ ಅಠಾವಳೆಯವರು ಆ.16 ರಂದು ರಾಮನಗರ ಹಾಗೂ ಮಂಡ್ಯಾ ನಗರಗಳಲ್ಲಿ ಸಭೆಗಳನ್ನು ನಡೆಸಲಿದ್ದಾರೆ, ಸಾವಿರಾರು ಆರ್ಪಿಐ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಗೋವಿಂದಯ್ಯ ತಿಳಿಸಿದರು. ಮುಖಂಡರುಗಳಾದ ರೂಪೇಶ್,ರುದ್ರೇಸ್,ಪ್ರಕಾಶ್,ಕಾಳರಾಜು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಪಠ್ಯ ರಚನಾ ಕಾರ್ಯಾಗಾರ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರ, ವಿಜಯ ಕಾಲೇಜು ಸಹಯೋಗದೊಂದಿಗೆ ಆ.17ರಂದು ಬೆಳಗ್ಗೆ 10.30ಕ್ಕೆ ಆರ್.ವಿ. ರಸ್ತೆಯಲ್ಲಿರುವ ವಿಜಯ ಕಾಲೇಜಿನಲ್ಲಿ ಬೆಂಗಳೂರು ವಿವಿ ಪದವಿ ಕನ್ನಡ ಪಠ್ಯ ರಚನಾ ಕಾರ್ಯಾಗಾರ ಏರ್ಪಡಿಸಿದೆ. ಕಾರ್ಯಾಗಾರದ ಉದ್ಘಾಟನೆಯನ್ನು ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಸಿ.ಬಿ. ಹೊನ್ನುಸಿದ್ಧಾರ್ಥ, ಪ್ರಾಂಶುಪಾಲರಾದ ಜಿ.ಎಂ. ನಿಜಗುಣ ನೆರವೇರಿಸಲಿದ್ದಾರೆ. ಭಾಗವಹಿಸುವ ಸಂಪಾದಕ ಮಂಡಳಿಯ ಓಓಡಿ ಸೌಲಭ್ಯ ಕಲ್ಪಿಸಲಿದೆ.
ಚುನಾವಣೆಯಲ್ಲಿ ಆಯ್ಕೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಡೆಸಿದ ರಾಜ್ಯ ಪರಿಷತ್ತಿನ ಚುನಾವಣೆಯಲ್ಲಿ ಶಿಕ್ಷಣ ಇಲಾಖೆ ಘಟಕದ ಎಂ.ಸಿ. ಕೆಂಪರಾಜು, ಡಿಎಸ್ಇಆರ್ಟಿ ಎಸ್.ಎನ್. ಸುರೇಶ್, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.