ಏರ್‌ಪೋರ್ಟಿಂದ ಮೈಸೂರಿಗೆ ಫ್ಲೈಬಸ್ ಸೇವೆಗೆ ಚಾಲನೆ
ದೇವನಹಳ್ಳಿ: ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ಫ್ಲೈಬಸ್ ಸಂಚಾರ ಸೇವೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಇಲ್ಲಿ ಚಾಲನೆ ನೀಡಿದರು.
ದೇಶದ ಇತರ ಸಾರಿಗೆ ನಿಗಮಗಳ ಪೈಕಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಅನುಕೂಲಕರ ಮತ್ತು ಆರಾಮದಾಯಕ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನಿಗಮ ಮತ್ತು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸಹಯೋಗದೊಂದಿಗೆ ಇಂದಿನಿಂದ ಫ್ಲೈ ಬಸ್ ಸೇವೆಯನ್ನು ಪ್ರಾರಂಭಿಸಿದೆ ಎಂದರಲ್ಲದೆ ಈ ಬಸ್ ನಾಲ್ಕು ಗಂಟೆಗೆ ಮೈಸೂರು ನಗರ ತಲಪುತ್ತದೆ. ಪ್ರಯಾಣ ದರ ಕೇವಲ ಒಂದು ಸಾವಿರ ರು.ಗಳು. ಮೈಸೂರಿನಿಂದ ಬರುವ ಪ್ರಯಾಣಿಕರು ಎರಡು ಮೂರು ಕಡೆ ಬಸ್ ಬದಲಾಯಿಸಿ ಅಥವ ಟ್ಯಾಕ್ಸಿಗಳಲ್ಲಿ ಪ್ರಯಾಣ ಮಾಡುವುದಕ್ಕಿಂತ ಫ್ಲೈ ಬಸ್‌ನಲ್ಲಿ ಪ್ರಯಾಣ ಆರಾಮದಾಯಕವಾಗಿದ್ದು ಈ ವಾಹನದಲ್ಲಿ ವಿಮಾನ ಸಂಚಾರ ವೇಳಾಪಟ್ಟಿಯ ನಿರಂತರ ಮಾಹಿತಿ, ಉಪಹಾರ ಮತ್ತು ಶೌಚಾಲಯ, ಪ್ರತಿ ಆಸನದಲ್ಲ್ಲೂ 60 ಚಾನಲ್‌ಗಳ ಟಿವಿ ಸೌಲಭ್ಯ, ಜಿಪಿಎಸ್ ಸೇವೆ ಸಹ ಲಭ್ಯವಿದೆ ಎಂದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಜಿಲ್ಲಾ ಕೇಂದ್ರಗಳಿಗೂ ಈ ರೀತಿಯ ಫ್ಲೈ ಬಸ್ ಸೌಲಭ್ಯ ನೀಡಲು ಯೋಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪೀಣ್ಯದಲ್ಲಿ ಸ್ಟಾಟಲೈಟ್ ಬಸ್ ನಿಲ್ದಾಣ: ಪ್ರಸಕ್ತ ವರ್ಷದಲ್ಲಿ ಒಟ್ಟು 1528 ವಾಹನಗಳನ್ನು ಸೇರ್ಪಡೆಗೊಳಿಸಲಾಗುವುದು. ಇದರಲ್ಲಿ 236 ಗ್ರಾಮಾಂತರ ಸಾರಿಗೆ ವಾಹನಗಳು, 1079 ಕರ್ನಾಟಕ ಸಾರಿಗೆ ವಾಹನಗಳು, 87 ನಗರ ಸಾರಿಗೆ ವಾಹನಗಳು, ಕರ್ನಾಟಕ ವೈಭವ 6 ವಾಹನಗಳು ಹಾಗೂ ವೊಲ್ವೋ ಮಲ್ಟಿ ಆಕ್ಸಲ್ 62 ವಾಹನಗಳು ಸೇರಿವೆ ಎಂದರು. ಮುಂದಿನ ದಿಗಳಲ್ಲಿ 32 ಕೋಟಿ ರು. ವೆಚ್ಚದಲ್ಲಿ ಪೀಣ್ಯದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ನಗರಕ್ಕೆ ಫ್ಲೈ ಬಸ್ ನೇರ ಸಂಪರ್ಕ ಕಲ್ಪಿಸಿರುವ ರಾಜ್ಯ ಸರ್ಕಾರಕ್ಕೆ ಮತ್ತು ಸಚಿವರಿಗೆ ಅಭಿನಂದಿಸಿ ದೇವನಹಳ್ಳಿ ತಾಲೂಕಿನ ಹಲವು ಗ್ರಾಮಗಳಿಗೆ ಸಾರಿಗೆ ಬಸ್‌ಗಳ ಅಗತ್ಯವಿದೆ ಎಂದರು.
ವಿಮಾನ ನಿಲ್ದಾಣ ಕಾರ್ಯಾಚರಣೆ ಅಧ್ಯಕ್ಷರಾದ ಹರಿಮರಾರ್, ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಮಂಜುನಾಥ ಪ್ರಸಾದ್ ಮಾತನಾಡಿದರು. ವಿಮಾನ ನಿಲ್ದಾಣದಿಂದ ಮೈಸೂರಿಗೆ 9.45, 14.00, 21.45, 02.00 ಸಮಯದಲ್ಲಿ ಸಂಚಾರ ಸಮಯ ನಿಗದಿಗೊಳಿಸಲಾಗಿದೆ ಎಂದರು.