ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ಭ್ರಷ್ಟಾಚಾರ ತೊಳೆಯಲು ಪವಿತ್ರ ನದಿಗಳ ನೀರು ಸಾಲದು

Rashmi Kasaragodu
Updated On : 15 Aug 2013, 1:03 am

ಕ.ಪ್ರ.ವಾರ್ತೆ   ರಾಮನಗರ   ಆ.14
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ದುರಾಡಳಿತ, ನಾಯಕರ ಭ್ರಷ್ಟಾಚಾರ ಮತ್ತು ಕಳಂಕದಿಂದ ಆ ಪಕ್ಷದ ಅಪವಿತ್ರವನ್ನು ತೊಳೆಯಲು ಇಡೀ ದೇಶದ ಪವಿತ್ರ ನದಿಗಳ ನೀರು ಸಾಲದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಪರಸ್ಪರ ಎರೆಚಾಡಿಕೊಂಡಿದ್ದ ಕೆಸರು ತೊಳೆಯಲು ಕಾವೇರಿ ನೀರೇ ಬೇಕೆನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬುಧವಾರ ಕನಕಪುರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಅವರು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಸಾರಥ್ಯದ ಯುಪಿಎ ಸರ್ಕಾರದ ಕರ್ಮಕಾಂಡಗಳು ಮಾಧ್ಯಮಗಳಲ್ಲಿ ಧಾರಾವಾಹಿ ರೂಪದಲ್ಲಿ ಬಿತ್ತರಗೊಳ್ಳುತ್ತಿವೆ. ಹೆಲಿಕಾಪ್ಟರ್ ಖರೀದಿಯಿಂದಿಡಿದು ಪ್ರತಿ ವ್ಯವಹಾರದಲ್ಲೂ ಕಿಕ್ ಬ್ಯಾಕ್ ನಡೆದಿದೆ. ಅದಕ್ಕೆ ಸಿಎಜಿ ವರದಿಯೇ ಸಾಕ್ಷಿ ಎಂದು ಕುಮಾರಸ್ವಾಮಿ ಆರೋಪಿಸಿದರು.
ಮುಖ್ಯಮಂತ್ರಿಗೆ ಸವಾಲ್: 7 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು 25 ವರ್ಷ ರಾಜಕಾರಣದಲ್ಲಿ ಕೈ ಹಿಡಿದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮತ್ತು ರಾಮನಗರ ಕ್ಷೇತದಲ್ಲಿ ತಾವು ಮಾಡಿರುವ ಸಾಧನೆ ಏನೆಂಬುದನ್ನು ಖುದ್ದು ಪರಿಶೀಲಿಸಿದ ಬಳಿಕವಷ್ಟೇ ಅಭಿವೃದ್ಧಿ ವಿಷಯದಲ್ಲಿ ಚರ್ಚೆ ಮಾಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ರಾಮನಗರ ಜಿಲ್ಲೆಯಲ್ಲಿ ಅಧಿಕಾರ ಉಂಡ ದೇವೇಗೌಡರ ಕುಟುಂಬವು ಈ ಭಾಗಕ್ಕೆ ನೀಡಿದ ಕೊಡುಗೆ ಏನೇನಿಲ್ಲ ಎಂದು ಹೋದೆಡೆಯಲ್ಲೆಲ್ಲಾ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ಮುಖಂಡರು ಬೊಗಳೆ ಬಿಡುತ್ತಿದ್ದಾರೆ. ಧೈರ್ಯವಿದ್ದರೆ ಪರಾಮರ್ಶೆಗೆ ಅವರೇ ದಿನ ಗೊತ್ತುಪಡಿಸಿ, ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಲಿ ಎಂದು ಹೇಳಿದರು.
ಅವರಿಗೆ ಅಷ್ಟೇಕೆ ಭೀತಿ: ಖಾಸಗಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ನಾನು ಒಂದೇ ಹಾರಕ್ಕೆ ಕೊರಳೊಡ್ಡಿರುವುದರಿಂದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ಅಷ್ಟೇಕೆ ಭೀತಿ ಮೂಡಿದೆಯೋ ಗೊತ್ತಿಲ್ಲ. ಒಂದೊಮ್ಮೆ ಒಗ್ಗೂಡಿ ಚುನಾವಣಾ ಅಖಾಡಕ್ಕೆ ಇಳಿದರೆ ಕಾಂಗ್ರೆಸ್ಸಿಗರ ಪರಿಸ್ಥಿತಿ ಮತ್ತಿನ್ನೇನಾಗುತ್ತದೋ ಎಂದು ವ್ಯಂಗ್ಯವಾಡಿದರು.
ನಮ್ಮದನ್ನು ಅಪವಿತ್ರ ಮೈತ್ರಿ ಎಂದು ಬಣ್ಣಿಸುವ ಕಾಂಗ್ರೆಸ್ ನಾಯಕರದ್ದು ಮಾತ್ರ ಎಂಥಹ ಪವಿತ್ರ ಮೈತ್ರಿ. ಜಾರ್ಖಂಡ್ ರಾಜ್ಯದಲ್ಲಿ ಬಿಜೆಪಿ ಜತೆಗಿದ್ದ ಜೆಎಂಎಂ ಸೆಳೆದಿದ್ದು ಸರಿಯೇ, ಕರ್ನಾಟಕದಲ್ಲಿ ಬಿಜೆಪಿ, ಕೆಜೆಪಿ ನಾಯಕರ ಬಾಗಿಲು ಕಾಯುತ್ತಿರುವುದು ಯಾವ ಪವಿತ್ರ ರಾಜಕಾರಣ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ಸಿನಿಂದಲೇ ಅಪರಾಧ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಹೆಚ್ಚು ಅಪರಾಧ ನಡೆದಿದೆ. ಲೋಕಸಭೆಗೆ ಮರು ಚುನಾವಣೆ ತಂದೊಡ್ಡಿದ್ದಕ್ಕೆ ನನ್ನನ್ನು ದೂಷಿಸುವ ಆ ಪಕ್ಷದವರು ತುರ್ತು ಪರಿಸ್ಥಿತಿ ನಂತರ ಸೋತು ಸುಣ್ಣವಾದ ಇಂದಿರಾ ಗಾಂಧಿ ಅವರಿಗೆ ಪುನರ್ವಸತಿ ಕಲ್ಪಿಸಲು ಡಿ.ಬಿ.ಚಂದ್ರೇಗೌಡರಿಂದ ರಾಜಿನಾಮೆ ಕೊಡಿಸಿ ಚಿಕ್ಕಮಗಳೂರಿನಲ್ಲಿ ಮರು ಚುನಾವಣೆ ತಂದೊಡ್ಡಿರಲಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
2004ರಲ್ಲಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಕ್ಷೇತ್ರದ ಜನಾದೇಶವನ್ನು ಧಿಕ್ಕರಿಸಿ, ಮರು ಚುನಾವಣೆಗೆ ಕಾರಣರಾಗಿದ್ದನ್ನು ಕಾಂಗ್ರೆಸ್ ನಾಯಕರು ಮರೆತಿದ್ದಾರೆ. ಅಧಿಕಾರ ದಾಹ ಬೇರೆಯವರಿಗಿಂತ ಕಾಂಗ್ರೆಸ್ ನಾಯಕರಿಗೇ ಹೆಚ್ಚಾಗಿದೆ ಎಂದು ಮರು ಚುನಾವಣೆ ವಿಷಯವಾಗಿ ಆಡಳಿತ ಪಕ್ಷದ ನಾಯಕರಿಗೆ ಎದಿರೇಟು ನೀಡಿದರು.
ರೈತ ವಿರೋಧಿ ಸಿದ್ದು : ರಾಜ್ಯದ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ನಾಶವಾಗಿರುವ ಬಗ್ಗೆ ಸದನದಲ್ಲಿ ಚರ್ಚಿಸಿದ್ದರೂ ಕ್ರಮ ಕೈಗೊಳ್ಳದ ಸಿದ್ದರಾಮಯ್ಯ ಅವರೊಬ್ಬ ರೈತ ವಿರೋಧಿ ಮುಖ್ಯಮಂತ್ರಿ. ಕಡಿಮೆ ದರದಲ್ಲಿ ಅಕ್ಕಿ ಜಾರಿಗೆ ಬಂದಿದ್ದು ಜನತಾದಳ ಸರ್ಕಾರವಿದ್ದಾಗ. ಈಗ ಅಕ್ಕಿ ವಿತರಣೆಯಲ್ಲಿ 33 ಲಕ್ಷ ಕುಟುಂಬಗಳನ್ನು ಹೊರಗಿಟ್ಟಿದ್ದಾರೆ ಎಂದು ಟೀಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement