ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿಗೆ 60 ಮಂದಿ ಆಯ್ಕೆ

Rashmi Kasaragodu
Updated On : 15 Aug 2013, 1:06 am

ದೇವನಹಳ್ಳಿ: ದೇವನಹಳ್ಳಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿಗೆ ಸಕ್ರಿಯವಾಗಿ ಹೋರಾಟ ಮಾಡಲು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಲು ಶಾಸಕ  ಪಿಳ್ಳಮುನಿಶಾಮಪ್ಪ ನೇತೃತ್ವದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು  ಐದು ಮಂದಿ ಸಂಚಾಲಕರು ಸೇರಿದಂತೆ ಒಟ್ಟು 60 ಮಂದಿಯನ್ನು ಆಯ್ಕೆ ಮಾಡಲಾಯಿತು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಸಭೆ ಆಯೋಜಿಸಲಾಗಿತ್ತು, ಈ ಸಭೆಗೆ ಪ್ರಮುಖವಾಗಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಲ್ಲದೆ ಕನ್ನಡಪರ ಸಂಘಟನೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಹೊಸಕೋಟೆ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರಾದ ಸೂ.ರಂ. ರಾಮಯ್ಯರವರು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಿದ್ದು  ಜಿಲ್ಲಾ ಕೇಂದ್ರವಾಗಲು ಎಲ್ಲ ರೀತಿಯ ಅರ್ಹತೆ ಪಡೆದಿರುವ ದೇವನಹಳ್ಳಿಗೆ ಜಿಲ್ಲಾ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಗಳು ವರ್ಗಾವಣೆಯಾಗಬೇಕು ಅಲ್ಲದೆ ಎಲ್ಲ ಅಧಿಕಾರಿಗಳು ಕಚೇರಿಗಳು ಇರುವ ಕಡೆಯೇ ವಾಸವಿದ್ದರೆ ಜನರ ಸಮಸ್ಯಗೆ ಸ್ಪಂದಿಸಲು ಸುಲಭವಾಗುತ್ತದೆ ಎಂದರು. ನಂದಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ದೇವನಹಳ್ಳಿ ಮೂಲಕವೇ ಸಾಗಬೇಕು ಮತ್ತು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಜಿಲ್ಲಾಧಿಕಾರಿಗಳು ಯಾವುದೇ ಸಮಸ್ಯೆಗೆ ಬೇಗನೆ ಸ್ಪಂದಿಸಲು ಸಾಧ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಮಾರೇಗೌಡ ಮಾತನಾಡಿ, ನಾವು  ಹೊಸದಾಗಿ ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ಮಾಡಬೇಕಾಗಿಲ್ಲ, ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದೆ. ಆದರೆ ಜಿಲ್ಲಾಧಿಕಾರಿಗಳ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿ ಅಲ್ಲದೆ ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳು ದೇವನಹಳ್ಳಿಗೆ ವರ್ಗಾವಣೆಯಾಗಬೇಕು ಎಂದರು.
ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಸರ್ಕಾರ ಯಾವುದೇ ಜಿಲ್ಲಾ ಕೇಂದ್ರ ಮಾಡುವ ಮುನ್ನ ಸರ್ಕಾರದ ಮಟ್ಟದಲ್ಲಿ ಸಮನ್ವಯ ಸಮಿತಿ ರಚನೆಯಾಗುತ್ತದೆ. ಆ ಸಮಿತಿಗೆ ದೇವನಹಳ್ಳಿ ಜಿಲ್ಲಾ ಕೇಂದ್ರವಾಗಲು ಇರುವ ಎಲ್ಲ ಅರ್ಹತಾ ಪಟ್ಟಿಯನ್ನು ಅಂಕಿ ಅಂಶಗಳೊಂದಿಗೆ ನೀಡಬೇಕಾಗುತ್ತದೆ.  ಜಿಲ್ಲಾಧಿಕಾರಿಗಳನ್ನು ಮತ್ತು ಉಪವಿಭಾಗಾಧಿಕಾರಿಗಳನ್ನು ಮುಂದಿನ ಬುಧವಾರ ಮಿನಿ ವಿಧಾನಸೌಧಕ್ಕೆ ಬರಲು ಕೋರುವುದಾಗಿ ತಿಳಿಸಿ ಅಂದು ಮತ್ತೆ ಹೋರಾಟ ಸಮಿತಿಯ ಮುಖಂಡರು  ಮನವಿ ಸಲ್ಲಿಸಲಿ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮೀನಾರಾಯಣ್, ಜೆಡಿಎಸ್ ಮುಖಂಡ ಆರ್.ಎನ್.ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಮುದಗುರ್ಕಿ ನಾರಾಯಣಸ್ವಾಮಿ ಮಾತನಾಡಿ, ಕೇವಲ ಪತ್ರಿಕಾ ಪ್ರಚಾರಕ್ಕಾಗಿ ಹೋರಾಟ ಸಮಿತಿಗೆ ಸದಸ್ಯರಾಗುವುದು ಬೇಕಾಗಿಲ್ಲ ಸಕ್ರಿಯವಾಗಿ ಹೋರಾಟ ಮನೋಭಾವ ಹೊಂದಿರಬೇಕು ಎಂದರು.
ಪ್ರಧಾನ ಸಂಚಾಲಕರಾಗಿ ಬಿ.ಕೆ.ಶಿವಪ್ಪ ಹಾಗೂ ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಶಿವರಾಮಯ್ಯ, ಜಿಲ್ಲಾ ಕಾಂಗ್ರಸ್ ಎಸ್ಸಿ ಘಟಕ ಅಧ್ಯಕ್ಷ ಎ.ಚಿನ್ನಪ್ಪ, ತಾಲೂಕು ಬಿಜೆಪಿ ಅಧ್ಯಕ್ಷರಾದ ಎನ್. ರಾಜಗೋಪಾಲ್, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸಗೌಡ ಅವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಚಂದ್ರಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು, ಸಿ.ಮುನಿರಾಜು, ತಾಲೂಕು ಸೊಸೈಟಿ ಅಧ್ಯಕ್ಷ ಗಂಗಾಧರ್,  ಹಿಂದುಳಿದ ಜಾತಿಗಳ ಒಕ್ಕೂಟ ಅಧ್ಯಕ್ಷ ಮುನಿಶಾಮಪ್ಪ, ಕಾರ್ಯದರ್ಶಿ ಎನ್.ಚಂದ್ರಶೇಖರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement