8 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಿಗಲಿದೆ
ಕ.ಪ್ರ.ವಾರ್ತೆ ರಾಮನಗರ ಆ.15
ಕಳೆದ ಬಾರಿ ಪರಾಭವಗೊಂಡ ಚನ್ನಪಟ್ಟಣವೂ ಸಹಿತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಿಗಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ, ಕೂಟಗಲ್ ಹೋಬಳಿಗಳ ವಿವಿಧೆಡೆ ಮತಯಾಚಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿರುವ ಮತದಾರರು ತಮ್ಮ ಗೆಲವಿಗೆ ಸಂಕಲ್ಪ ತೊಟ್ಟಿದ್ದಾರೆ ಎಂದು ಹೇಳಿದರು.
ನಮ್ಮದು ಕುಟುಂಬ ರಾಜಕರಣವಾದರೆ, ಕಾಂಗ್ರೆಸ್ ಪಕ್ಷದ್ದು ವಂಶಪಾರಂಪರ್ಯ ರಾಜಕರಣವಾಗಿದೆ. ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಅವರ ಒತ್ತಾಸೆಯಂತೆ ನಾನು ಈ ಮರು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದರು.
ಪಕ್ಷದಲ್ಲಿನ ಕೆಲವು ಲೋಪ ದೋಷಗಳಿಂದಾಗಿ ಚನ್ನಪಟ್ಟಣದಲ್ಲಿ ಅಲ್ಪಮತಗಳಿಂದ ಸೋಲು ಅನುಭವಿಸಬೇಕಾಯತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಸ್ವಯಂ ದೇವೇಗೌಡರೇ ಚನ್ನಪಟ್ಟಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಪಾಲಿನ ಸಂಸದರ ನಿಧಿಯನ್ನು ಅಲ್ಲಿ ಹೆಚ್ಚಾಗಿ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.