ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಭಿವೃದ್ಧಿ ಉದ್ದೇಶದಿಂದ ಕಾಂಗ್ರೆಸ್‌ಗೆ ಬೆಂಬಲ

Rashmi Kasaragodu
Updated On : 16 Aug 2013, 1:15 am

ಚನ್ನಪಟ್ಟಣ: ತಾಲೂಕಿನ ಅಭಿವೃದ್ಧಿಯ ಉದ್ದೇಶದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಕಾಂಗ್ರೆಸ್‌ಗೆ ಬೆಂಬಲಿಸಲಿದೆ ಎಂದು ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ್ ಪ್ರಕಟಿಸಿದರು.
ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಕರೆಯಲಾಗಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಿಂದ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ ರು.
ನಾನು ಯಾರ ಮುಲಾಜಿಗೆ ಒಳಗಾಗೂ ಈ ನಿರ್ಧಾರ ತೆಗೆದುಕೊಂಡಿಲ್ಲ. ಮುಖ್ಯ ಮಂತ್ರಿಗಳು ಮಾತನಾಡಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಕಾಂಗ್ರೆಸ್ ಬೆಂಬಲಿಸುತ್ತಿದ್ದು ನಮ್ಮ ಈ ಮೈತ್ರಿ ಕೇವಲ ಮುಂದಿನ ಲೋಕಸಭಾ ಚುನಾವಣೆವರೆಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಇಬ್ಬರೂ ಸಮಾನ ಶತ್ರುಗಳು: ನನ್ನ ಪಾಲಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಸಮಾನ ಶತ್ರುಗಳಿದ್ದಂತೆ, ಹಲವಾರು ಚುನಾವಣೆಗಳಲ್ಲಿ ನನ್ನನ್ನು ಸೋಲಿಸಲು ಇಬ್ಬರೂ ಪ್ರಯತ್ನ ಮಾಡಿದ್ದಾರೆ. ಈಬಾರಿಯ ಚುನಾವಣೆಯಲ್ಲಿ ನಾನು ಯಾವುದೇ ಒಳ ಒಪ್ಪಂದ ಮಾಡಿಕೊಳ್ಳದೆ ನೇರವಾಗಿ  ಕಾರ್ಯಕರ್ತರ ಮುಂದೆ ನನ್ನ ನಿರ್ಧಾರ ಪ್ರಕಟಿಸುತ್ತಿದ್ದೇನೆ ಎಂದರು.
ಮುಖ್ಯಮಂತ್ರಿಗಳು ಸಾಕಷ್ಟು ಜನಪರ ಕಾರ್ಯಕ್ರಮ ಕೊಟ್ಟಿದ್ದಾರೆ. ಈ ಬಾರಿ ನಮ್ಮ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇ ಆದಲ್ಲಿ ಈತಾಲೂಕಿನ ಅಭಿವೃದ್ಧಿಗೂ ಸಾಕಷ್ಟು ಸಹಕಾರ ಸಿಗಲಿದೆ  ಎಲ್ಲವನ್ನೂ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ ಎಂದರು.
ಕಾಂಗ್ರೆಸ್‌ಗೆ ಮತ್ತೆ ಹೋಗುವುದಿಲ್ಲ: ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಿಸಿದ ನನ್ನನ್ನು ಕಾಂಗ್ರೆಸ್‌ಗೆ ಬಾ ಎಂದು ಕರೆದವರು ಟಿಕೆಟ್ ಕೊಡದೆ ಮೋಸ ಮಾಡಿದರು. ಹಿಂದೆ ಸೈಕಲ್ ಎಲ್ಲ ನಡೆಯೋಲ್ಲ ಎಂದಿದ್ದವರು ಇದೀಗ ಸೈಕಲ್ ಮೇಲೆ ಹೋಗಲು ದುಂಬಾಲು ಬಿದ್ದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ ಇಲ್ಲಿಂದ ಗೆದ್ದು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದವರು ಏನೂ ಮಾಡಿಲ್ಲ ಎಂದು ಜೆಡಿಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಮತ್ತು ದೇವೇಗೌಡರು ಈ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದ್ದಾರೆಂಬುದಕ್ಕೆ ಯಾವುದೇ ಸಾಕ್ಷಿ ಗುಡ್ಡೆ ಇಲ್ಲ, ಅಧಿಕಾರ ಇದ್ದಾಗ ಏನೂ ಮಾಡದವರು ಇದೀಗ ನಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು ಬೊಗಳೆ ಬಿಡುತ್ತಿದ್ದು ಜನತೆ ಇವರ ಮಾತನ್ನು ನಂಬಬಾರದೆಂದು ಮನವಿ ಮಾಡಿದರು.
ಯೋಗೀಗೆ ಜವಾಬ್ದಾರಿ: ಈ ಸಭೆಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಈ ಕ್ಷೇತ್ರದ ಚುನಾವಣೆಯನ್ನು ಯೋಗೇಶ್ವರ್ ನೇತೃತ್ವದಲ್ಲೇ ಎದುರಿಸಲು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದರು. ವಲಸಿಗರನ್ನ ಹೊರಗೆ ಕಳುಹಿಸುವ ಜತೆಗೆ ಅವಕಾಶವಾದಿ ರಾಜಕಾರಣವನ್ನು ಕೊನೆಗಾಣಿಸಲು ಸಮಾಜವಾದಿ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಶ್ರಮಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಕೆ.ಎಂ.ಎಫ್ ನಿರ್ದೇಶಕ ಪಿ.ನಾಗರಾಜು, ಸಮಾಜವಾದಿ ಪಕ್ಷದ ಮುಖಂಡರಾದ ರಾಂಪುರ ಮಲುವೇಗೌಡ,ಎಸ್.ಸಿ.ಶೇಖರ್, ನಗರಸಭಾ ಸದಸ್ಯ ಮುದ್ದುಕೃಷ್ಣ, ಶಭಿರ್‌ವುಲ್ಲಾ ಬೇಗ್,  ಕೋಡಂಬಹಳ್ಳಿ ಸಿದ್ದರಾಮು ಮುಂತಾದವರು ಉಪಸ್ಥಿತರಿದ್ದರು.



ಡಿಕೆಶಿ ಕೆಳಗಿಳಿಸಲು ಆಗ್ರಹ
ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಡಿ.ಕೆ.ಶಿವಕುಮಾರ್‌ರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಕೆಲ ಸಮಾಜವಾದಿ ಪಕ್ಷದ ಕಾರ್ಯಕರ್ತರು ಆಗ್ರಹ ಪಡಿಸಿದ ಘಟನೆ ಸಭೆಯಲ್ಲಿ ನಡೆಯಿತು. ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್‌ಗೆ ಬಿ.ಪಾರಂ ತಪ್ಪಿಸಿದ್ದೇ ಡಿ.ಕೆ.ಶಿವಕುಮಾರ್. ಇದೀಗ ತಮ್ಮನನ್ನು ಗೆಲ್ಲಿಸಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಇವರಿಗೆ ಮಣೆಹಾಕುವುದು ಬೇಡ ವೇದಿಕೆಯಿಂದ ಕೆಳಗಿಳಿಸಿ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿದ ಶಾಸಕ ಯೋಗೇಶ್ವರ್ ವೇದಿಕೆಯಿಂದ ಕೆಳಗಿಳಿಸುವುದು ನಮ್ಮ ಸಂಸ್ಕೃತಿಯಲ್ಲ, ಅವರು ಸಭೆಗೆ ಬಂದಿದ್ದಾರೆ. ಗೌರವಿಸೋಣ. ನಿಮ್ಮ ಸಮಸ್ಯೆ ಏನೇ ಇದ್ದರೂ ನೇರವಾಗಿ ಪ್ರಶ್ನೆಮಾಡಿ  ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement