ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭ
ದೇವನಹಳ್ಳಿ: ಇಲ್ಲಿನ ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾ ಸಂಘದವರು 67ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸನ್ಮಾನ ಸಮಾರಂಭವನ್ನು ಸಂಘದ ಅಧ್ಯಕ್ಷ ಡಿ.ಎಂ.ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ತೋಟಗಾರಿಕೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ಸಿ.ರಮೇಶ್ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಸೂರ್ಯಕಲಾ ಮೂರ್ತಿ ಅವರನ್ನ್ನು ಸನ್ಮಾನಿಸಲಾಯಿತು. ರಾಷ್ಟ್ರ ಧ್ವಜಾರೋಹಣವನ್ನು ಸಂಘದ ಗೌರವಾಧ್ಯಕ್ಷರಾದ ಪಟೇಲ್ ದೊಡ್ಡವೆಂಕಟಪ್ಪ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್ ಹಾಗೂ ಮಾಜಿ ಅಧ್ಯಕ್ಷ ಡಾ.ಮುನಿವೆಂಕಟಪ್ಪ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎನ್.ಶ್ರೀನಿವಾಸಮೂರ್ತಿ ವಂದನೆ ಅರ್ಪಿಸಿದರು.
ಪುರಸಭೆಯಲ್ಲಿ ಸ್ವಾತಂತ್ರ್ಯೋತ್ಸವ
ದೇವನಹಳ್ಳಿ: ಇಲ್ಲಿನ ಪುರಸಭೆಯಲ್ಲಿ 67ನೇಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತಾಂಬೆ ಭಾವಚಿತ್ರಕ್ಕೆ ಮಹಿಳಾ ಪುರಸಭಾ ಸದಸ್ಯರು ಪೂಜೆ ಸಲ್ಲಿಸಿದರು. ಪುರಸಭಾ ಮುಖ್ಯಾಧಿಕಾರಿ ಎಂ.ಆರ್.ಮಂಜುನಾಥ್ ಧ್ವಜಾರೋಹಣ ಮಾಡಿದರು. ಈ ಸಂಧರ್ಭದಲ್ಲಿ ಮಾಜಿ ಪುರಸಭಾಧ್ಯಕ್ಷ ಎಸ್.ಲಕ್ಷ್ಮೀನಾರಾಯಣ್, ಸಿ.ಜಗನ್ನಾಥ್, ಹಾಗೂ ರತ್ನಮ್ಮ ರವಿಕುಮಾರ್, ಎಲ್ಲ ಪುರಸಭಾ ಸದಸ್ಯರು ಭಾಗವಹಿಸಿದ್ದರು.
ಲಯನ್ಸ್ ಸಂಸ್ಥೆಯಲ್ಲಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ 67ನೆಯ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲಾಗಿತ್ತು, ಮಾಜಿ ಶಾಸಕ ಜಿ.ಚಂದ್ರಣ್ಣ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ನಮ್ಮ ದೇಶದ ಭದ್ರತೆಗೆ ದಕ್ಕೆ ತರುವಂತಹ ಕಾರ್ಯಗಳನ್ನು ಪಾಕಿಸ್ತಾನ ಮಾಡುತ್ತಿದೆ. ಅವರನ್ನು ಎದುರಿಸುವ ಧೈರ್ಯ ನಮ್ಮ ಸರ್ಕಾರಕ್ಕೆ ಇದೆ ಎಂದರಲ್ಲದೆ ಎಲ್ಲ ಭಾರತೀಯರು ಶಾಂತಿ ನೆಮ್ಮದಿ ಮತ್ತು ಗೌರವದಿಂದ ಬಾಳುವಂತಾಗಬೇಕು ಎಂದರು. ಸಂಸ್ಥೆ ಅಧ್ಯಕ್ಷ ಆರ್.ನಾಗರಾಜಯ್ಯ, ಲಯನ್ಸ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಕೆ.ಸಿ.ಲೋಕೇಶ್ ಉಪಸ್ಥಿತರಿದ್ದರು. ಪುಟ್ಟಪ್ಪನ ಗುಡಿ ರಸ್ತೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.
ವಿವಿಧೆಡೆ ಆಚರಣೆ
ಮಾಗಡಿ: ತಾಲೂಕಿನ ವಿವಿಧೆಡೆ 67ನೇ ಸ್ವಾತಂತ್ರ್ಯ ದಿನಾಚರಣೆ ಸಡಗರ ಸಂಭ್ರಮದಿಂದ ನೆರವೇರಿತು. ಮಾಗಡಿ ಪಟ್ಟಣದ ಶ್ರೀವಿದ್ಯಾನಿಧಿ, ಕೆಂಪೇಗೌಡ ಫ್ರೌಡಶಾಲೆಯಲ್ಲಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಿ.ಎಚ್.ಮಲ್ಲಿಕಾರ್ಜುನಯ್ಯ ಧ್ವಜಾರೋಹಣ ನೆರವೇರಿಸಿ, ಮಕ್ಕಳಿಗೆ ಹಾಲು ಬ್ರೆಡ್ ವಿತರಣೆ ಮಾಡಿದರು. ವಾಸವಿ ವಿದ್ಯಾನಿಕೇತನ, ಸರ್ವೋದಯ, ಸೇಂಟ್ ಮೈಕೆಲ್, ಸರಸ್ವತಿ ವಿದ್ಯಾಮಂದಿರ, ಗಂಗಾಧರೇಶ್ವರ ಬಾಲಕಿಯರ ಪ್ರೌಢಶಾಲೆ, ಸರ್ಕಾರಿ ಪ.ಪೂ.ಕಾಲೇಜು, ಮಾರುತಿ ಪಬ್ಲಿಕ್ ಶಾಲೆ, ಬಾಲಾಜಿ ವಿದ್ಯಾ ಸಂಸ್ಥೆಯಲ್ಲಿ ಆಚರಿಸಲಾಯಿತು.