ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪರಿಶಿಷ್ಟ ಜಾತಿಗೆ ಮಡಿವಾಳ ಸೇರ್ಪಡೆಗೆ ಆಗ್ರಹ

Rashmi Kasaragodu
Updated On : 16 Aug 2013, 1:15 am

ಕ.ಪ್ರ.ವಾರ್ತೆ   ಮಾಗಡಿ   ಆ.15
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿ, ಸಮಾಜಕ್ಕೆ ಸಿಗಬೇಕಾದ ಸೌಲತ್ತುಗಳನ್ನು ಒದಗಿಸುವಂತೆ ಒತ್ತಾಯಿಸಲು ಸೆ.ಎರಡನೇ ವಾರದಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾದ್ಯಕ್ಷ ನಂಜಪ್ಪ ನುಡಿದರು.
    ಅವರು ಮಾಗಡಿ ಪಟ್ಟಣದ ತಿರುಮಲೆ ವಿಜಯ ರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೇಶದ 17 ರಾಜ್ಯಗಳಲ್ಲಿ ಮಡವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲೂ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು. ಮಡಿವಾಳ ಸಮಾಜಕ್ಕೆ ಸಿಗಬೇಕಾದ ಸೌಲತ್ತುಗಳು ಸಿಗುತ್ತಿಲ್ಲ, ಭೂ ರಹಿತರಿಗೆ ಭೂಮಿ ನೀಡಬೇಕು. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಯುವಕರಿಗೆ ಅಗತ್ಯ ನಿವೇಶನ ಮತ್ತು ಸೌಲಭ್ಯಗಳನ್ನು ಒದಗಿಸಬೇಕು. ಪ್ರತಿ ತಾಲೂಕಿಗೂ ಮಡಿಕಟ್ಟೆ ನಿರ್ಮಿಸಬೇಕು ಹಾಗೂ ರಾಜಕೀಯವಾಗಿ ಸ್ಥಾನಮಾನ ನೀಡಬೇಕು ಎಂಬ ಇತರೆ ಬೇಡಿಕೆಗಳನ್ನು ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಸಂಘಟಿತರಾಗಿ: ಮಡಿವಾಳ ಸಮಾಜದ ಮಠಾಧೀಶ ಮಾಚೀದೇವ ಶ್ರೀ ಶಿವಯೋಗಾನಂದಪುರಿ ಸ್ವಾಮೀಜಿ  ಸಾನಿಧ್ಯ ವಹಿಸಿ ಮಾತನಾಡುತ್ತಾ ಮಡಿವಾಳರು ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಘಟಿತರಾಗಬೇಕು. ಎಷ್ಟೆ ಕಡುಬಡತನವಿದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮಾಜದ ಉದ್ಧಾರವೇ ಸಂಘಟನೆಯ ಮೂಲ ಉದ್ಧೇಶವಾಗಿದೆ. ಸೆ.ತಿಂಗಳ ಎರಡನೆ ವಾರದಲ್ಲಿ ರಾಜ್ಯ ಮಟ್ಟದ ಮಡಿವಾಳರ ಸಮಾವೇಶ ಆಯೋಜಿಸಲು ರಾಜ್ಯ ಸಂಘದ ಪದಾಧಿಕಾರಿಗಳು ತೀರ್ಮಾನ ಕೈಗೊಂಡಿದ್ದು, ರಾಜ್ಯಾದ್ಯಂತ ಇರುವ ಮಡಿವಾಳರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ಸಿಗೆ ಪ್ರಾಮಾಣಿಕವಾಗಿ ಸಹಕರಿಸಬೇಕು ಎಂದರು.
   ಮಡಿವಾಳರು ಕೀಳರಿಮೆ ಬಿಡಬೇಕು. ಸರ್ಕಾರದ ಸೌಲತ್ತುಗಳನ್ನು ಪಡೆಯಬೇಕು. ಸಾಮಾಜಿಕವಾಗಿ , ಆರ್ಥಿಕವಾಗಿ, ರಾಜಕೀಯವಾಗಿ  ಮುಂದೆ ಬರಬೇಕು. ಸಂಘಟನಾತ್ಮಕವಾಗಿ ಮಡಿವಾಳರ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮಡಿವಾಳ ಸಂಘ  ಜಿ.ಡಿ. ಗೋಪಾಲ್ ತಿಳಿಸಿದರು.
   ಸಂಘದ ಉಪಾಧ್ಯಕ್ಷ ಪುಟ್ಟಯ್ಯ, ರಾಜಗೋಪಾಲ್, ಧನಂಜಯ,ಚಂದ್ರಶೇಖರ್, ಶಿವಕುಮಾರ್, ವೆಂಕಟರಾಮಯ್ಯ, ಯೋಗೇಶ್ವರಿ ವಿಜಯ, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶ್ರೀನಿವಾಸ್, ಕೆ.ಆರ್. ಉಮೇಶ್, ಮಂಜುನಾಥ್, ರಂಗಸ್ವಾಮಿ, ಶ್ರೀನಿವಾಸಮೂರ್ತಿ, ವೆಂಕಟಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement