ವಿವಿಧೆಡೆ ಸ್ವಾತಂತ್ರ್ಯೋತ್ಸವ
ಆನೇಕಲ್ಲು: ಆನೇಕಲ್ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ 67ನೆಯ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ನೆರವೇರಿಸಿದರು. ಬೆಳಗ್ಗೆಯಿಂದಲೇ ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳಲ್ಲಿ ಧ್ವಜಾರೋಹಣ ನಡೆಸಿ ಸ್ವಾತಂತ್ರ ಹೋರಾಟಗಾರರ ಬಗ್ಗೆ ತಿಳಿ ಹೇಳಲಾಯಿತು. ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಿತು. ಆನೇಕಲ್ಲಿನ ಪರುಸಭಾ ಕಚೇರಿ, ನ್ಯಾಯಾಲಯ ಆವರಣ, ತಾಲೂಕು ಪಂಚಾಯ್ತಿ, ತಾಲೂಕು ಕಚೇರಿಯಲ್ಲಿ ಧ್ವಜಾರೋಹಣೆ ನೆರವೇರಿಸಲಾಗಿತ್ತು. ಖಾಸಗಿ ಶಾಲಾ ಮಕ್ಕಳು ಕೇಸರಿ ಹಸಿರು ಮತ್ತು ಬಿಳಿ ಬಣ್ಣದ ಉಡುಪುಗಳನ್ನು ಧರಿಸಿ ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ತಾಲೂಕಿನ ಮರಸೂರು, ಚಂದಾಪುರ, ನೆರಳೂರು, ಅತ್ತಿಬೆಲೆ, ಬೊಮ್ಮಸಂದ್ರ, ಸರ್ಜಾಪುರ, ದೊಮ್ಮಸಂದ್ರ, ಮುತ್ತಾನಲ್ಲೂರುನ ಸರ್ಕಾರಿ ಹಾಗೂ ಖಾಸಗೀ ಶಾಲೆಗಳಲ್ಲಿ ಧ್ವಜಾರೋಹಣ ಮಾಡಿ ಕಾರ್ಯಕ್ರಮ ನಡೆಸಿದರು.
ಸೂರ್ಯನಗರದಲ್ಲಿ ಸ್ವಾತಂತ್ರ್ಯೋತ್ಸವ
ಸೂರ್ಯನಗರ 1ನೇ ಹಂತ ಕಚೇರಿಯಲ್ಲಿ ಅದಿಕಾರಿ ವರ್ಗ ಹಾಗೂ ಸಿಬ್ಬಂದಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವ ನಡೆಸಿದರು. ನಿವೃತ್ತರು ಹಾಗೂ ಹಿರಿಯ ನಾಗರೀಕರ ಸ್ವರ್ಗವಾದ ಸೂರ್ಯ 1ನೇ ವಸತಿ ಸಂಕೀರ್ಣದಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ಜನರು ಹಿಂದಿ, ಇಂಗ್ಲಿಷ್ ಹಾಗೂ ದಕ್ಷಿಣ ಭಾರತ ಭಾಷೆಯಲ್ಲಿ ದೇಶ ಭಕ್ತರ ಭಾವನೆಗಳನ್ನು ವ್ಯಕ್ತ ಪಡಿಸಿದರು. ಸೂರ್ಯ ವಸತಿ ಸಮುಚ್ಚಯದ ನಿವಾಸಿಗಳಿಗೆ ಇದೇ ಸಂದರ್ಭದಲ್ಲಿ ಸಿಹಿ ಹಂಚಲಾಯಿತು.