ಕಾಂಗ್ರೆಸ್ ಮುಖಂಡರಿಗೆ ಎಚ್ಡಿಕೆ ತಿರುಗೇಟು
ಚನ್ನಪಟ್ಟಣ: ಈ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಪಕ್ಷದ ಕೊಡುಗೆ ಏನೆಂಬುದು ಜನತೆಗೆ ಗೊತ್ತಿದೆ, ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಮುಖಂಡಸರ್ಟಿಫಿಕೇಟ್ ಕೊಡುವುದು ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿ, ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಅಪಪ್ರಚಾರದ ಮೂಲಕ ಜನತೆಯನ್ನು ಮರಳು ಮಾಡಬಹುದೆಂದು ಕೊಂಡಿದ್ದರೆ ಅದು ಕೇವಲ ಭ್ರಮೆ ಎಂದರು.
ರಾಜ್ಯದಲ್ಲಿ ಅನಗತ್ಯವಾಗಿ ಉಪಚುನಾವಣೆಗಳನ್ನು ನಡೆಸಿರುವುದು ಕಾಂಗ್ರೆಸ್ ವಿನಾ ಜೆಡಿಎಸ್ ಅಲ್ಲ, ಬಳ್ಳಾರಿಗೆ ಸೋನಿಯಾಗಾಂಧಿ ಕರೆತಂದು ನಿಲ್ಲಿಸಿ ನಂತರ ರಾಜಿನಾಮೆ ಕೊಡಿಸಿದವರು ಯಾರು, ಚಿಕ್ಕಮಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಡಿ.ಬಿ.ಚಂದ್ರೇಗೌಡರ ಕೈಯಲ್ಲಿ ರಾಜಿನಾಮೆ ಕೊಡಿಸಿ ಚುನಾವಣೆ ನಡೆಸುವಂತೆ ಮಾಡಿದವರು ಯಾರು ಎಂದು ಪ್ರಶ್ನಿಸಿದರು.
ಒಂದು ರು.ಗೆ ಅಕ್ಕಿ ಕೊಡುವುದಾಗಿ ಹೇಳಿಕೊಳ್ಳುತ್ತಿರುವ ಸರ್ಕಾರ ಒಂದು ರು.ಗೆ ಅಕ್ಕಿ ಕೊಡಲು 33 ಲಕ್ಷ ಕುಟುಂಬಗಳ ಪಡಿತರ ಚೀಟಿಯನ್ನು ಕಸಿದು ಕೊಂಡಿದೆ, ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಸಿದುಕೊಳ್ಳುವ ಪ್ರವೃತ್ತಿ ಒಳ್ಳೆಯದಲ್ಲ ಎಂದರು.
ಪಡಿತರ ವ್ಯವಸ್ಥೆಯಲ್ಲಿ ಇದೀಗ ಕೇವಲ ಅಕ್ಕಿಮಾತ್ರ ಕೊಡುತ್ತಿದ್ದಾರೆ, ಗೋದಿ, ಸೀಮೆ ಎಣ್ಣೆಗೆ ಏನು ಮಾಡುವುದು ಎಂದು ಪ್ರಶ್ನಿಸಿದ ಅವರು ಕಡಿಮೆ ಬೆಲೆಗೆ ಪಡಿತರ ಧಾನ್ಯ ವಿತರಣೆ ಮಾಡುವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದವರು ದೇವೇಗೌಡರು ಎಂದರು.
ಮಧುಬಂಗಾರಪ್ಪ ಮಾತನಾಡಿ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಸೋಲಲು ಇಲ್ಲಿನ ಕಾರ್ಯಕರ್ತರು ಕಾರಣವಲ್ಲದಿದ್ದರೂ ಆ ಸೋಲನ್ನು ಬಡ್ಡಿಸಮೇತ ತೀರಿಸುವ ಅವಕಾಶ ಬಂದೊದಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅಶ್ವತ್ಥ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಲಿಂಗೇಶ್ಕುಮಾರ್, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಮುಖಂಡರಾದ ರಾಂಪುರ ರಾಜು, ತಾ.ಪಂ. ಸದಸ್ಯ ಗುರುಕುಮಾರ್, ನಾಗವಾರ ರಂಗಸ್ವಾಮಿ ಮುಂತಾದವರು ಹಾಜರಿದ್ದರು.
ಕಣ್ಣೀರಿಟ್ಟ ಕುಮಾರ
ಲೋಕಸಭಾ ಉಪಚುನಾವಣೆಯ ಪ್ರಚಾರ ಸಭೆಗೆ ಮಳೆಯ ನಡುವೆಯೂ ಉತ್ಸಾಹದಿಂದ ಕಾರ್ಯಕರ್ತರು ಪಾಲ್ಗೊಂಡಿದ್ದನ್ನು ಕಂಡು ಭಾವುಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಟ್ಟರು. ಸುರಿಮಳೆಯನ್ನೂ ಲೆಕ್ಕಿಸದೆ ಕಾರ್ಯಕರ್ತರು ನನಗಾಗಿ ಕಾಯ್ದು ನಿಂತಿದ್ದೀರಿ, ನಿಮ್ಮ ಸಮಸ್ಯೆ ಏನೆಂಬುದು ನನಗೆ ಅರಿವಿದೆ ನಿಮ್ಮ ನೋವನ್ನು ಕಂಡು ನಾನು ಕಣ್ಣೀರಿಟ್ಟರೆ ವಿರೋಧ ಪಕ್ಷದವರು ವ್ಯಂಗ್ಯ ಆಡುತ್ತಾರೆ ಎಂದು ವಿಷಾದಿಸಿದರು.