ತತ್ವ ಸಿದ್ಧಾಂತ ಮರೆತ ಜೆಡಿಎಸ್, ಬಿಜೆಪಿ, ಕೆಜೆಪಿ: ಖರ್ಗೆ
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಆ. 16
ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿ ಪೈಕಿ ಯಾವ ಪಕ್ಷಕ್ಕೆ ಮತ್ತಿನ್ಯಾವ ಪಕ್ಷದ ತತ್ವ, ಸಿದ್ಧಾಂತಗಳು ಒಪ್ಪಿಗೆಯಾಗಿದ್ದಾವೋ ತಿಳಿಯದು ಎಂದು ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೂರು ಪಕ್ಷಗಳೂ ತಮ್ಮ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿವೆ. ಜನತೆಗೆ ನೀಡಿದ ವಾಗ್ದಾನ ಮರೆತು, ಅಪವಿತ್ರ ಮೈತ್ರಿಗೆ ಇಳಿದಿವೆ ಎಂದು ಟೀಕಿಸಿದರು.
ಪ್ರಸಕ್ತ ಮರು ಚುನಾವಣೆಯು ಕೇವಲ ಏಳೆಂಟು ತಿಂಗಳ ಅಧಿಕಾರಕ್ಕಾಗಷ್ಟೇ ನಡೆಯುತ್ತಿದೆ ಎನ್ನುವ ತಾತ್ಸಾರವನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡಬಾರದು. ಯಾವುದೇ ಹಂತದಲ್ಲೂ ಪಕ್ಷದ ತತ್ವ, ಸಿದ್ಧಾಂತ, ನೀತಿ ಮತ್ತು ಕಾರ್ಯಕ್ರಮಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಿ ಎಂದರು.
1 ಲಕ್ಷ ಮತಗಳ ಅಂತರ: ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಉಭಯ ಲೋಕಸಭೆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ತಲಾ 1 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸುವು ಖಚಿತ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಎರಡೂ ಕಡೆ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಸಿ.ಪಿ.ಯೋಗೇಶ್ವರ್ ಬೆಂಬಲದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷಕ್ಕೆ ಬಲ ಬಂದಿದೆ. ಜೇಡ್ರಳ್ಳಿ ಕೃಷ್ಣಪ್ಪ, ಎಂ.ಶ್ರೀನಿವಾಸ್ ಪಕ್ಷ ಸೇರ್ಪಡೆ, ಮಂಡ್ಯದಲ್ಲಿ ಕೃಷ್ಣ, ಕಲ್ಪನಾ ಸಿದ್ದರಾಜು ಆಗಮನ ಪಕ್ಷಕ್ಕೆ ನೆರವಾಗಲಿದೆ ಎಂದರು.
ಮೋದಿ ವಿರುದ್ಧ ಟೀಕೆ: ಯೋಜನಾ ಆಯೋಗದ ವರದಿ ಪ್ರಕಾರ ಗುಜರಾತ್ ಅಭಿವೃದ್ಧಿಯಲ್ಲಿ 12ನೇ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆ ರಾಜ್ಯದ ಸಾಧನೆ ಕಳಪೆಯಾಗಿದೆ. ಹೀಗಿರುವಾಗ ಗುಜರಾತ್ ನಂ.1 ಎಂದು ಮೋದಿ ಬಿಂಬಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಖರ್ಗೆ ಟೀಕಿಸಿದರು.
ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನ ಮಂತ್ರಿ ನೀಡುವ ಸಂದೇಶಕ್ಕೆ ಇದುವರೆಗೆ ಯಾವುದೇ ರಾಜ್ಯದ ಮುಖ್ಯಮಂತ್ರಿ ಟೀಕಿಸಿದ ನಿದರ್ಶನವಿಲ್ಲ. ಪ್ರಧಾನಿ ಜತೆ ಹೋಲಿಸಿಕೊಂಡು ಮೋದಿ ತಾವು ದೊಡ್ಡವರಾಗಲು ಹೊರಟಿದ್ದಾರೆ ಎಂದು ಅವರು ಛೇಡಿಸಿದರು.
ಸಾಧನೆ ತೃಪ್ತಿ ತಂದಿದೆ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲೇ ಕಾಂಗ್ರೆಸ್ ಸರ್ಕಾರ ತನ್ನ ಜನಪರ ಕಾರ್ಯಕ್ರಮಗಳ ಮೂಲಕ ಜನ ಮನ್ನಣೆಗೆ ಪಾತ್ರವಾಗಿದೆ. ಈ ಬಗ್ಗೆ ಜನತೆಯಲ್ಲೂ ತೃಪ್ತಿಯಿದ್ದು, ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂದರು. ಸಚಿವ ವಿನಯಕುಮಾರ ಸೊರಕೆ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ ಹಾಜರಿದ್ದರು.