'ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಧಿಕ್ಕರಿಸಿ'
ರಾಮನಗರ: ಕೇಂದ್ರ ಮತ್ತು ರಾಜ್ಯದಲ್ಲಿ ದುರಾಡಳಿತದೊಂದಿಗೆ ಕಪ್ಪು ಹಣ ಕೂಡಿಟ್ಟಿರುವ ಕಾಂಗ್ರೆಸ್, ರಾಷ್ಟ್ರೀಯ ಪಕ್ಷವಾದರೂ ಮರು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಬಿಜೆಪಿ, ಒಳ ಸಂಚಿನ ರಾಜಕಾರಣ ಮಾಡಿಕೊಂಡೇ ಬಂದಿರುವ ಜೆಡಿಎಸ್ ದಿಕ್ಕರಿಸುವಂತೆ ಆರ್ಪಿಐ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್ ಅಠಾವಳೆ ಮತದಾರರಿಗೆ ಮನವಿ ಮಾಡಿದ್ದಾರೆ. ನಗರದ ಹಳೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪಕ್ಷದ ಅಭ್ಯರ್ಥಿ ಕುಣಿಗಲಲ್ಶಿವಣ್ಣ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಜಾತಿಗೆ, ಕುಟುಂಬಕ್ಕೆ ಮಾತ್ರ ಸೀಮಿತವಾಗಿವೆ. ಈ ಪರಿಣಾಮ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ಸೋಗಲಾಡಿತನ: ಜ್ಯಾತ್ಯತೀತ ಪಕ್ಷ ತಮ್ಮದು ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗಾಗಿ ಕೋಮುವಾದಿ ಬಿಜೆಪಿಯೊಡನೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮತದಾರರು ಇಂತಹ ಸೋಗಲಾಡಿತನದ ನಾಯಕರ ಮಾತಿಗೆ ಮರುಳಾಗಬಾರದು. ಆ ಪಕ್ಷವನ್ನು ತಿರಸ್ಕರಿಸಬೇಕು ಎಂದು ರಾಮದಾಸ್ ಅಠಾವಳೆ ತಿಳಿಸಿದರು.
ಕಳಂಕಿತರಿಗೆ ಟಿಕೆಟ್: ಜೈಲಿನಲ್ಲಿರಬೇಕಾದವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಕಳಂಕಿತ ಎಂದು ಗೊತ್ತಿದ್ದರೂ ಟಿಕೆಟ್ ನೀಡಿರುವ ಕಾಂಗ್ರೆಸ್ ವರಿಷ್ಠರು ತಮ್ಮ ತನವನ್ನು ಪ್ರದರ್ಶಿಸಿದ್ದಾರೆ ಎಂದು ಆರ್ ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಆಪಾದಿಸಿದರು.
'ಸಮುದಾಯವನ್ನು ವಿಶ್ವಾಸದಿಂದ ಕಾಣಿ'
ಮಾಗಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯವನ್ನು ವಿಶ್ವಾಸದಿಂದ ಕಾಣಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಬಸವರಾಜ್ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರು ಮಾಗಡಿ ಪಟ್ಟಣ ಕಲ್ಯಗೇಟ್ನಲ್ಲಿರುವ ಸಿದ್ದರೂಢಾಶ್ರಮದಲ್ಲಿ ವೀರಶೈವ ಸಮುದಾಯದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಲಿಂಗಾಯುತ ಸಮುದಾಯದ ಪ್ರಭಾವಿ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿಯೂ ಆಗಿದ್ದಾರೆ. ಅಂತಹವರಿಗೆ ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ತೋಟಗಾರಿಕೆ ಇಲಾಖೆಯ ಖಾತೆ ನೀಡಿರುವುದು ನೋಡಿದರೆ ಲಿಂಗಾಯುತ ಸಮುದಾಯವನ್ನು ಕಡೆಗಣಿಸಿರುವುದು ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ ಎಂದರು. ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಸಮುದಾಯಕ್ಕೆ ಯತ್ನಾಳ್ ಕರೆ ನೀಡಿದರು. ಶಾಸಕ ಎಚ್.ಸಿ. ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.