ಮೋದಿ ಪ್ರಧಾನಿಯಾಗಲು ಗೌಡರು ಒಪ್ತಾರಾ?
ಕ.ಪ್ರ.ವಾರ್ತೆ ಟಿ ಬೆಂಗಳೂರು ಟಿ ಆ. 16
ಬಿಜೆಪಿ ಜತೆ ಮೈತ್ರಿ ವಿಚಾರದಲ್ಲಿ ಇಬ್ಬಂದಿತನ ಪ್ರದರ್ಶನ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಒಪ್ಪಿಗೆ ನೀಡುತ್ತಾರೆಯೇ ? ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಕನಕಪುರ ರಸ್ತೆ ಗುಬ್ಬಲಾಳದ ಬಳಿ ಚುನಾವಣಾ ಪ್ರಚಾರ ಭಾಷಣ ಮಾಡಿ ಮಾತನಾಡಿದ ಅವರು, ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಜತೆ ಸೇರಿ ಕುಮಾರಸ್ವಾಮಿ ಸರ್ಕಾರ ರಚಿಸಿದ್ದರು. ಆಗ ಇದೇ ದೇವೇಗೌಡರು ತಮ್ಮ ಹೆಣದ ಮೇಲೆ ಅಧಿಕಾರ ನಡೆಸುವಂತೆ ಪುತ್ರನ ವಿರುದ್ಧ ಕಿಡಿಕಾರಿದ್ದರು. ಆದರೆ ಒಂದು ತಿಂಗಳು ಕಳೆಯುವಷ್ಟರಲ್ಲೇ ಮಗನ ಆಡಳಿತಕ್ಕೆ ಪ್ರಶಸ್ತಿಪತ್ರ ಕೊಟ್ಟಿದ್ದರು ಎಂದು ವ್ಯಂಗ್ಯವಾಡಿದರು.
ಆದರೆ ಇದೇ ದೇವೇಗೌಡರು 20 ತಿಂಗಳು ಕಳೆದ ನಂತರ ಮತ್ತೆ ಧೋರಣೆ ಬದಲಿಸಿದ್ದರು. ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದರೆ ರಾಜ್ಯಕ್ಕೆ ಬೆಂಕಿ ಹತ್ತಿಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅದೆಲ್ಲವನ್ನೂ ಮರೆತು ಮತ್ತೆ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ. ಒಂದೆಡೆ ಗೌಡರು ಒಪ್ಪಂದ ಮಾಡಿಕೊಂಡಿಲ್ಲ ಎಂದರೆ, ಹೊಂದಾಣಿಕೆ ಮಾಡಿಕೊಂಡರೆ ತಪ್ಪೇನು ? ಎಂದು ಕುಮಾರಸ್ವಾಮಿ ಪ್ರಶ್ನಿಸುತ್ತಾರೆ. ಈ ಇಬ್ಬಂದಿತನವನ್ನು ಜನ ಮೆಚ್ಚುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ನೀರಾವರಿ ಕ್ಷೇತ್ರಕ್ಕೆ ತಾವು ಅಪಾರ ಕೊಡುಗೆ ನೀಡಿದ್ದೇವೆ ಎಂದು ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ ಎಂದು ಆಪಾದಿಸಿದರು.
ಕಾವೇರಿ ನದಿ ವಿಚಾರದಲ್ಲಿ ದೇವೇಗೌಡರು ಆ ಭಾಗದ ಜನತೆಗೆ ನೀಡಿದ ಕೊಡುಗೆ ಶೂನ್ಯ. ಇವರ ಸ್ವಾರ್ಥಕ್ಕಾಗಿ ನಾಗಮಂಗಲ ಹಾಗೂ ಕುಣಿಗಲ್ ಪ್ರದೇಶಕ್ಕೆ ನೀರು ಪೂರೈಕೆ ಮಾಡುವುದು ಇನ್ನೂ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಬಿಜೆಪಿ ಸರ್ಕಾರ 100 ದಿನ ಅಧಿಕಾರ ಪೂರೈಸಿದಾಗ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿ ಸಾರ್ವಜನಿಕರ ಹಣ ಪೋಲು ಮಾಡಿತ್ತು.
ಆದರೆ ಜನ ಸೇವೆ ಮಾಡುವುದು ಹೇಗೆ ಎಂಬುದನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ನೋಡಿ ಕಲಿಯಬೇಕು ಎಂದು ಹೇಳಿದರು.
ದೇವೇಗೌಡರ ಜತೆ ತಿಥಿ ಊಟಕ್ಕೆ ಹೋಗಿರಲಿಲ್ಲ
ನಾನು ದೇವೇಗೌಡರ ಜತೆ ತಿಥಿ ಊಟಕ್ಕೆ ಹೋಗಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ಶುಕ್ರವಾರ ಈ ವಿಷಯ ತಿಳಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ತಿಥಿ ಮಾಡಲಿದ್ದಾರೆ. ಅದರ ಊಟಕ್ಕಾಗಿಯೇ ಸಿದ್ದರಾಮಯ್ಯ ಅವರು ದೇವೇಗೌಡರೊಂದಿಗೆ ತಿಥಿ ಊಟಕ್ಕೆ ಹೋಗದೆ 20 ವರ್ಷದಿಂದ ಕಾದು ಕುಳಿತಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ತಿಥಿ ಊಟಕ್ಕೆ ಹೋಗಿ ತನ್ನ ಆಸೆ ತೀರಿಸಿಕೊಳ್ಳಲಿ.
ಟಿ ಎಚ್.ಡಿ. ರೇವಣ್ಣ, ಜೆಡಿಎಸ್ ನಾಯಕ