'ಅಹಿಂದ ಮತದಾರರು ಕಾಂಗ್ರೆಸ್ ಬೆಂಬಲಿಸಲಿ'
ರಾಮನಗರ: ಜನಪರ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಕ್ಷೇತ್ರದ ಅಹಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ಬೆಂಬಲಿಸಬೇಕು ಎಂದು ಈಚೆಗೆ ಕಾಂಗ್ರೆಸ್ ಸೇರಿರುವ ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ ಕರೆ ನೀಡಿದ್ದಾರೆ. ತಾಲೂಕಿನ ತಿಮ್ಮಯ್ಯನದೊಡ್ಡಿ, ವಿಭೂತಿಕೆರೆ, ಹುಚ್ಚಯ್ಯನದೊಡ್ಡಿ ಸಹಿತ ವಿವಿಧೆಡೆ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ವೇಳೆ ಮಾತನಾಡಿ, ಪ್ರತಿಪಕ್ಷಗಳು ಅಪವಿತ್ರ ಮೈತ್ರಿಯೊಂದಿಗೆ ಕುತಂತ್ರ ರಾಜಕಾರಣ ನಡೆಸುತ್ತಿವೆ ಎಂದು ಟೀಕಿಸಿದರು. ಪ್ರಸಕ್ತ ಎದುರಾಗಿರುವ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲನುಭವಿಸಿದಲ್ಲಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ. ಹೀಗಾಗಿ ಅಹಿಂದ ವರ್ಗವು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ರೈತ ಪರ ಹಲವಾರು ಯೋಜನೆ ರೂಪಿಸಿ, ಕಲ್ಯಾಣ ಕರ್ನಾಟಕ ನಿರ್ಮಿಸುವ ಉದ್ದೇಶ ಸಿದ್ದರಾಮಯ್ಯ ಅವರದ್ದಾಗಿದೆ. ಇದನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಹಿಸುತ್ತಿಲ್ಲ ಎಂದು ಪುಟ್ಟಸ್ವಾಮಿ ಆರೋಪಿಸಿದರು. ಕ್ಷೇತ್ರಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ನಿಶ್ಚಿತ ಎಂದರು. ಪೋತೇಗೌಡ, ಲಕ್ಷ್ಮಣ್, ಬೀರೇಶ್, ಉದಯ್ಕೆರಕೋಡಿ ಮತ್ತಿತರರು ಭಾಗವಹಿಸಿದ್ದರು.