ಕೈಗೆ ಸಾಹಿತಿಗಳ ಬೆಂಬಲ
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಆ.17
ಸಾಹಿತಿಗಳಾದ ಪ್ರೊ. ಎಸ್.ಪಿ. ಸಿದ್ದರಾಮಯ್ಯ, ಡಾ.ಎಲ್. ಹನುಮಂತಯ್ಯ, ಪ್ರೊ. ಜಿ.ಕೆ.ಗೋವಿಂದರಾವ್, ಪ್ರೊ. ಎನ್.ವಿ. ನರಸಿಂಹಯ್ಯ, ಪ್ರೊ. ಮರುಳಸಿದ್ದಯ್ಯ ಅವರು ಪ್ರಸಕ್ತ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ್ದು, ವಿಷಯಾಧಾರಿತ ಚುನಾವಣೆ ಬಿಟ್ಟು ಕೆಸರೆರೆಚಾಟಕ್ಕೆ ಇಳಿದ ರಾಜಕಾರಣಿಗಳ ಬಗ್ಗೆ ವಿಷಾದಿಸಿದ್ದಾರೆ.
ಅಭಿವೃದ್ಧಿ ವಿಷಯವನ್ನು ಮುಂದಿಟ್ಟುಕೊಂಡು ಮತ ಕೇಳಬೇಕಾದ ರಾಜಕೀಯ ಪಕ್ಷವೊಂದು ಒಬ್ಬ ಹೆಣ್ಣು ಮಗಳ ಹುಟ್ಟಿನ ವಿಚಾರವಾಗಿ ಕೀಳುಮಟ್ಟದ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವದ ಅಧಃಪತನಕ್ಕೆ ಕಾರಣವಾಗಿವೆ ಎಂದು ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮತದಾರ ಬೆಲೆ ಕೊಡೊಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸುತ್ತಿರುವುದನ್ನು ಪ್ರತಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ. ವೈಯಕ್ತಿಕ ದ್ವೇಷದಿಂದ ಕಾಂಗ್ರೆಸ್ಅನ್ನು ಹಣಿಯಲು ಪ್ರತಿಪಕ್ಷಗಳು ಈ ಅಪವಿತ್ರ ಮೈತ್ರಿಗೆ ಮುಂದಾಗಿವೆ. ಉಭಯ ಕ್ಷೇತ್ರಗಳ ಸಜ್ಜನ ಮತದಾರರು ಇದಕ್ಕೆ ಬೆಲೆ ಕೊಡುವುದಿಲ್ಲ ಎಂದು ಸಾಹಿತಿಗಳು ಹೇಳಿದರು.
ಕಳೆದ 5 ವರ್ಷದ ಅವಧಿಯಲ್ಲಿ ಬಿಜೆಪಿ ನಡೆಸಿದ್ದ ಆಪರೇಷನ್ ಕಮಲಕ್ಕೂ ಈಗ ನಡೆದಿರುವ ಮೈತ್ರಿ ರಾಜಕಾರಣಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಮತದಾರರು ನೀಡಿದ್ದ ತೀರ್ಪನ್ನು ಧಿಕ್ಕರಿಸಿ, ಜವಾಬ್ದಾರಿ ಮರೆತು ರಾಜಿನಾಮೆ ನೀಡಿ ಈ ಉಪ ಚುನಾವಣೆಗೆ ಎಚ್.ಡಿ. ಕುಮಾರಸ್ವಾಮಿ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ದೇವೇಗೌಡರೇಕೆ ಮೌನ: ಆಪರೇಷನ್ ಕಮಲದಿಂದ ರಾಜ್ಯದಲ್ಲಿ ಹಲವಾರು ಚುನಾವಣೆಗಳು ನಡೆದವು. ಆ ಸಮಯದಲ್ಲಿ ಬಿಜೆಪಿ ವಿರುದ್ಧ ಯಾರು ಟೀಕೆ ಮಾಡಿದ್ದರೋ ಇಂದು ಅವರೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಜಾತ್ಯತೀತ ಮೌಲ್ಯ ಕಾಪಾಡಬೇಕಿದ್ದ ದೇವೇಗೌಡರು ಮೌನ ವಹಿಸಿರುವ ಬಗ್ಗೆ ಸಾಹಿತಿಗಳು ಪ್ರಶ್ನಿಸಿದರು.
ಕಳೆದ 8 ವರ್ಷದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಸಮೀಕ್ಷೆ ಪ್ರಕಾರ ದೇಶದ 32 ರಾಜ್ಯಗಳ ಪೈಕಿ ಕರ್ನಾಟಕವು ಬಡತನ ರೇಖೆಗಿಂತ ಕೆಳಗಿರುವವರಲ್ಲಿ 20, ಹಸುಗೂಸು ಸಾವಿನಲ್ಲಿ 19, ಅಪೌಷ್ಟಿಕತೆಯಲ್ಲಿ 21, ತಲಾ ಆದಾಯದಲ್ಲಿ 15ನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗಿಂದ ರಾಜ್ಯವು ಹಿಂದಿದೆ ಎಂದು ಹೇಳಿದರು.
ಸಾಧನೆ ಮೆಚ್ಚಿ ಬೆಂಬಲ: ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದ ಮೂರು ತಿಂಗಳಲ್ಲೇ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ನಿಂದ ಮಾತ್ರ ಸ್ಥಿರ ಸರ್ಕಾರ ಸಾಧ್ಯ. ಹೀಗಾಗಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ಭ್ರಷ್ಟ ಮತ್ತು ಅತಿ ಭ್ರಷ್ಟರ ನಡುವೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಮತದಾರರು ವಿವೇಚನೆಯಿಂದ ಕಡಿಮೆ ಭ್ರಷ್ಟ ವ್ಯಕ್ತಿಯನ್ನು ಆರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.