ಚುನಾವಣೆಗೆ ನಾಲ್ವರು ವೀಕ್ಷಕರು
ಕ.ಪ್ರ.ವಾರ್ತೆ ರಾಮನಗರ ಆ. 17
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರನ್ನು ಕೇಂದ್ರ ಚುನಾವಣಾ ಆಯೋಗ ನೇಮಕಗೊಳಿಸಿದೆ. ತಲಾ 4 ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬರು ವೀಕ್ಷಕರಾಗಿದ್ದಾರೆ.
ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ವಿಧಾನಸಭಾ ಕ್ಷೇತ್ರಗಳಿಗೆ ಐಎಎಸ್ ಅಧಿಕಾರಿ ವಿಜಯಸಿಂಗ್ ವೀಕ್ಷಕರಾಗಿದ್ದು, ಅವರ ಮೊ. 9449150349. ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್, ಕುಣಿಗಲ್ ಕ್ಷೇತ್ರಗಳ ವ್ಯಾಪ್ತಿಗೆ ವೀಕ್ಷಕರಾಗಿರುವ ಮತ್ತೊಬ್ಬ ಐಎಎಸ್ ಅಧಿಕಾರಿ ರವಿಕಾಂತ್ ಉಪಾಧ್ಯಾಯ ಅವರ ಮೊ. 9449150451.
ಚುನಾವಣಾ ವೀಕ್ಷಕರು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ರಾಮನಗರದ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಬೆಳಗ್ಗೆ 10 ರಿಂದ ರಾತ್ರಿ 11ರವರೆಗೆ ಎಲ್ಲ ದಿನ ಕರ್ತವ್ಯ ನಿರ್ವಹಿಸುವರು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು, ಮತದಾರರಿಗೆ ಹಣ, ಮದ್ಯ ಸಹಿತ ಆಮಿಷವೊಡ್ಡುಡುವ ಬಗ್ಗೆ ಸಾರ್ವಜನಿಕರು ಮೊಬೈಲ್ ಮೂಲಕ ಇಲ್ಲವೇ ಖುದ್ದು ಭೇಟಿಯಾಗಿ ದೂರು ನೀಡಬಹುದಾಗಿದೆ.
ಬೈರೇನ್ ವೆಚ್ಚ ವೀಕ್ಷಕ: ಕ್ಷೇತ್ರದಲ್ಲಿ ವೆಚ್ಚ ವೀಕ್ಷಕರಾಗಿ ಬೈರೇನ್ ಪಾರ್ಮರ್ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ಅಹವಾಲು ಅಥವಾ ದೂರುಗಳಿದ್ದಲ್ಲಿ ಮೊ. 9449150962 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ತಿಳಿಸಿದ್ದಾರೆ.
ವಿಶೇಷ ದಂಡಾಧಿಕಾರಿಗಳು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯದಂಡಾಧಿಕಾರಿಗಳನ್ನು ನೇಮಿಸಿ ಚುನಾವಣಾಧಿಕಾರಿ ವಿ. ಶ್ರೀರಾಮರೆಡ್ಡಿ ಆದೇಶ ಹೊರಡಿಸಿದ್ದಾರೆ.
ವಿಶೇಷ ಕಾರ್ಯ ದಂಡಾಧಿಕಾರಿಗಳು ನೀತಿ ಸಂಹಿತೆ ಪಾಲನೆ, ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮೇಲ್ವಿಚಾರಣೆ ಸಹಿತ ವಿವಿಧ ಕರ್ತವ್ಯಗಳನ್ನು ನಿರ್ವಹಿಸಿ, ಪ್ರತಿದಿನ ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗೆ ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ಕಂಟ್ರೋಲ್‌ರೂಂ: ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆ ವೇಳೆ ಹಣ ಮತ್ತು ಇತರೆ ವಸ್ತುಗಳ ಅಕ್ರಮ ಸಾಗಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಮನವಿ ಮಾಡಿದೆ. ಆದಾಯ ತೆರಿಗೆ ಇಲಾಖೆಯು 24 ಗಂಟೆ ಕೆಲಸ ನಿರ್ವಹಿಸುವ ಕಂಟ್ರೋಲ್‌ರೂಂ ಆರಂಭಿಸಿದ್ದು, ಟೋಲ್ ಫ್ರೀ ಸಂಖ್ಯೆ- 18004257707 ಆಗಿದೆ.