ಜೆಡಿಎಸ್ ಬಗ್ಗೆ ಮಾತನಾಡಲು ಡಿಕೆಶಿಗೆ ನೈತಿಕ ಹಕ್ಕಿಲ್ಲ
ರಾಮನಗರ: ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ರಾತ್ರಿಯಾಗುತ್ತಲೇ ಮುಖ್ಯಮಂತ್ರಿ ನಿವಾಸಕ್ಕೆ ಕಡತ ಹಿಡಿದುಕೊಂಡು ಹೋಗಿ ಕೆಲಸ ಮಾಡಿಸಿಕೊಂಡು, ಸದನದಲ್ಲಿ ಗಪ್ಚುಪ್ ಆಗಿರುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಟೀಕಿಸಿದರು. ನಗರದ ರೇಲ್ವೆ ವೃತ್ತದಲ್ಲಿ ಶನಿವಾರ ರಾತ್ರಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಮ್ಯಾಚ್ ಫಿಕ್ಸಿಂಗ್ ರಾಜಕಾರಣ ಮಾಡಿಕೊಂಡು ಬಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೆ ಹೊರತು ಕುಮಾರಸ್ವಾಮಿ ಅಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ಸಹಿತ ಸಾಕಷ್ಟು ಅನುಕೂಲ ಆಗಿರುವುದು ಜೆಡಿಎಸ್ದಿಂದ. ಒಬ್ಬ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಇಡೀ ಹಿಂದುಳಿದವರ ಉದ್ಧಾರ ಆಗದು ಎಂದು ಹೇಳಿದರು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು. ಶಾಸಕರಾದ ಮಧು ಬಂಗಾರಪ್ಪ, ಚಿಕ್ಕಮಾದು, ಜಿ.ಟಿ. ದೇವೇಗೌಡ, ಇ.ಕೃಷ್ಣಪ್ಪ, ಅಪ್ಸರ್ ಆಗಾ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಮತ್ತಿತರರು ಇದ್ದರು.