ನೀರಿನ ಟ್ಯಾಂಕರ್‌ನಲ್ಲಿ 3500 ಲೀ. ಡೀಸೆಲ್ ಸಾಗಣೆ ಪತ್ತೆ
ದೊಡ್ಡಬಳ್ಳಾಪುರ: ನೀರಿನ ಟ್ಯಾಂಕರ್‌ವೊಂದರಲ್ಲಿ ಡೀಸೆಲ್ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್‌ವೊಂದನ್ನು ಹಿಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ಕರವೇ ತಾಲೂಕು ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಮತ್ತು ಕಾರ್ಯದರ್ಶಿ ರಾಜಘಟ್ಟ ರವಿ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕಾರ್ಯಕರ್ತರು ತಾಲೂಕು ಪಂಚಾಯಿತಿ ಕಚೇರಿ ಬಳಿ ಟ್ರ್ಯಾಕ್ಟರ್‌ಅನ್ನು ತಡೆದು ಪರಿಶೀಲಿಸಿದಾಗ ಟ್ಯಾಂಕರ್‌ನಲ್ಲಿ ಡೀಸೆಲ್ ಇರುವುದು ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕರವೇ ಅಧ್ಯಕ್ಷ ಚಂದ್ರಶೇಖರ್, ಡೀಸೆಲ್‌ಅನ್ನು ಸಾಗಾಣಿಕೆ ಮಾಡಲು ಕೆಲ ನಿರ್ದಿಷ್ಟ ಮಾನದಂಡಗಳಿವೆ. ಅವೆಲ್ಲವನ್ನೂ ಮೀರಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ನಲ್ಲಿ ಸಾಗಾಣಿಕೆ ಮಾಡುತ್ತಿರುವುದು ಸರಿಯಲ್ಲ. ಎಚ್ಚರ ತಪ್ಪಿದರೆ ದೊಡ್ಡ ಅನಾಹುತಗಳಿಗೂ ಕಾರಣವಾದೀತು. ಈ ರೀತಿಯಾಗಿ ಡೀಸೆಲ್ ಸಾಗಾಣಿಕೆ ಮಾಡಲು ಅನುಮತಿ ಇದೆಯೇ ಡೀಸೆಲ್ ಅನ್ನು ಇಷ್ಟ ಬಂದ ರೀತಿಯಲ್ಲಿ ಸಾಗಾಣಿಕೆ ಮಾಡುತ್ತಿರುವ ಪೆಟ್ರೋಲ್ ಬಂಕ್ ಒಂದು ರೀತಿಯಲ್ಲಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಜೊತೆಗೆ ಟ್ಯಾಂಕರ್‌ನ ಹಿಂದೆ- ಮುಂದೆ ಯಾವುದೇ ಎಚ್ಚರಿಕೆ ಬರೆಹ ಕೂಡ ಇಲ್ಲ. ಟ್ಯಾಂಕರ್‌ಗೆ ನೋಂದಣಿ ಸಂಖ್ಯೆ ಕೂಡ ಇಲ್ಲ ಎಂದು ಆರೋಪಿಸಿದ್ದಾರೆ.
ಇದು ಡಿಕ್ರಾಸ್ ಬಳಿಯ ಟಿ.ಎಸ್.ಮಹದೇವಯ್ಯ ಪೆಟ್ರೋಲ್ ಬಂಕ್‌ನಿಂದ ದೊಡ್ಡಬಳ್ಳಾಪುರ ಕೆಎಸ್ಸಾರ್ಟಿಸಿ ಡಿಪೋಗೆ ಪೂರೈಕೆಯಾಗುತ್ತಿದ್ದ ಡೀಸೆಲ್ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್ಸಾರ್ಟಿಸಿ ಬಸ್ ಡಿಪೋ ವ್ಯವಸ್ಥಾಪಕ ಸತೀಶ್, ಒಟ್ಟು 3500 ಲೀಟರ್ ಡೀಸೆಲ್‌ಅನ್ನು ಟ್ಯಾಂಕರ್‌ನಲ್ಲಿ ತರಲಾಗುತ್ತಿತ್ತು. ಇದು ಅಕ್ರಮ ಡೀಸೆಲ್ ಅಲ್ಲ. ಇದಕ್ಕೆ ಬಿಲ್ ಕೂಡ ಇದೆ. ಬಂಕ್‌ಗೆ ಹೋಗಿ ಪೆಟ್ರೋಲ್ ತುಂಬಿಸಿಕೊಂಡು ಮತ್ತೆ ಡಿಪೋಗೆ ಬರುವುದಕ್ಕೆ ಬೇಕಾದುವ ಡೀಸೆಲ್ ಉಳಿತಾಯಕ್ಕಾಗಿ ಡಿಪೋಗೇ ಡೀಸೆಲ್ ತರಿಸಿಕೊಳ್ಳುವ ಅವಕಾಶವಿದೆ. ಆದರೆ ನೀರಿನ ಟ್ಯಾಂಕರ್‌ನಲ್ಲಿ ಪೆಟ್ರೋಲ್ ತುಂಬಿ ತಂದಿರುವುದರ ಬಗ್ಗೆ ಮಾಹಿತಿ ಇಲ್ಲ ಎಂದಷ್ಟೇ ಪ್ರತಿಕ್ರಿಸಿದ್ದಾರೆ. ಸಂಬಂಧಪಟ್ಟ ಪೆಟ್ರೋಲ್ ಬಂಕ್ ವಿರುದ್ಧ ಡೀಸೆಲ್ ಸಾಗಾಣಿಕೆಯಲ್ಲಿ ಅಜಾಗರೂಕತೆ ತೋರಿರುವ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರವೇ ಒತ್ತಾಯಿಸಿದೆ.