ಪಠ್ಯ ಜತೆ ವ್ಯವಹಾರಿಕ ಜ್ಞಾನವೂ ಅಗತ್ಯ: ಭಾಸ್ಕರ್ರಾವ್
ಕ.ಪ್ರ. ವಾರ್ತೆ, ಆನೇಕಲ್ಲು, ಆ.17
ಪಠ್ಯ ಅಧ್ಯಯನ ಕಡ್ಡಾಯವಾದರೂ ಸಂದರ್ಭಕ್ಕೆ ತಕ್ಕ ಆಲೋಚನೆ, ಅನುಷ್ಠಾನ ಮಾಡುವ ಛಲ ಇದ್ದಲ್ಲಿ ಎಲ್ಲವನ್ನೂ ಸುಲಲಿತವಾಗಿ ಸಾಧಿಸಬಹುದು ಎಂದು ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಶನಿವಾರ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಎಸ್ಬಿಆರ್ ಬಿಜಿನೆಸ್ ಸ್ಕೂಲ್ನಲ್ಲಿ ಎಂಬಿಎ ತರಗತಿ ಪ್ರಾರಂಭೋತ್ಸವದಲ್ಲಿ ಮಾತನಾಡಿ, ಪಠ್ಯದ ಜೊತೆಗೆ ವಿಶ್ವದ ವಿದ್ಯಮಾನ ಅರಿಯುವ ಪ್ರಯತ್ನ ಮಾಡಿ. ಇಂಥದೇ ಉದ್ಯೋಗ ಬೇಕೆಂಬ ಹಂಬಲ ಬೇಡ. ಏನನ್ನಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಯಾವ ರೀತಿಯ ಉದ್ಯೋಗ ಎಂಬ ಪ್ರಶ್ನೆ ನಿಮ್ಮಲ್ಲೇ ಹುಟ್ಟಿದಾಗ ಆಯ್ಕೆಯ ದಾರಿ ನಿಗದಿಯಾಗುತ್ತದೆ. ಓದಿನ ಜತೆಗೆ ಮಾರುಕಟ್ಟೆಯ ಪರಿಚಯವೂ ಬೇಕು. ಬಲಿಷ್ಠ ಭಾರತ ನಿರ್ಮಾಣದ ಕನಸು ನಿಚ್ಚಳವಾಗಿರಬೇಕು ಎಂದು ತಿಳಿಸಿದರು.
ಹಿರಿಯರ ಬಗ್ಗೆ ಗೌರವ ಇದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ನಷ್ಟದಲ್ಲಿರುವ ಸಂಸ್ಥೆಯನ್ನು ಮುಚ್ಚದೇ ಲಾಭದತ್ತ ಕೊಂಡೊಯ್ಯುವ ಗುರಿ, ಧ್ಯೇಯ ಹಾಗೂ ತಾಳ್ಮೆ ಬೆಳೆಸಿಕೊಳ್ಳಬೇಕೆಂದರು.
ಐಎಸ್ಬಿಆರ್ ಅಂತಹ ಗುಣಮಟ್ಟ ಸಂಸ್ಥೆಗಳು, ವಿಶ್ವ ಮಾರುಕಟ್ಟೆ ಎದುರಿಸಲು ಸಜ್ಜುಗೊಳಿಸುವ ಕೌಶಲ್ಯ ಹೊಂದಿದೆ. ಮಾರುಕಟ್ಟೆ ಅಧ್ಯಯನ ಎಂದರೆ ರಫ್ತು, ಆಮದು, ಲಾಭ, ನಷ್ಟದ ಜತೆಗೆ ಬೇಡಿಕೆ ಹಾಗೂ ಪೂರೈಕೆಯನ್ನೂ ಅವಲಂಬಿಸಿದೆ. ಹೊಸತನ್ನು ಆವಿಷ್ಕರಿಸುವ ರಚನಾತ್ಮಕ ಆಲೋಚನೆ, ಕ್ರಿಯಾತ್ಮಕ ಶ್ರದ್ಧೆ ಹೊಂದಿದಲ್ಲಿ ಧನಾತ್ಮಕ ಫಲಿತಾಂಶ ಲಭಿಸುತ್ತದೆ ಎಂದರು.
ಜ್ಯೋತಿ ಲ್ಯಾಬೊರೇಟರೀಸ್ ಮುಖ್ಯಸ್ಥ ಕೆ. ಉಲ್ಲಾಸ್ ಕಾರಂತ್ ಮಾತನಾಡಿ, ಉದ್ಯೋಗಿಯಾಗುವುದಕ್ಕಿಂತ ಉದ್ಯಮಿಯಾಗುವ ಪ್ರಯತ್ನ ಮಾಡಿ. ವಿಶ್ವದ ಯಾವುದೋ ಸಂಸ್ಥೆಗೆ ನಿಮ್ಮಲ್ಲಿರುವ ಬುದ್ಧಿಶಕ್ತಿ ಹಾಗೂ ಕೌಶಲ್ಯವನ್ನು ಧಾರೆ ಎರೆಯುವ ಬದಲು ನಿಮ್ಮದೇ ಆದ ಉದ್ಯಮ ಪ್ರಾರಂಭಿಸಿ. ಮಹಿಳೆಯರು ಉದ್ಯಮಿಯಾದಲ್ಲಿ ದೇಶದ ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಕಾಣಬಹುದು ಎಂದರು
ಈ ಸಂದರ್ಭದಲ್ಲಿ ಇನ್ಫೋಸಿಸ್, ಅರವಿಂದ್ ಮಿಲ್ಸ್, ದುಬಾಸ್ ಎಂಜಿನಿಯರಿಂಗ್, ಫಿಡೆಲಿಟಿ ನ್ಯಾಷನಲ್ ಫೈನಾನ್ಷಿಯಲ್, ಕೋನಾರ್ ಎಂಜಿನಿಯರಿಂಗ್ ಸರ್ವೀಸಸ್ ಸೇರಿದಂತೆ ನಾಡಿನ ಖ್ಯಾತ ಕಂಪನಿಗಳ ಪ್ರಮುಖರು ತಮ್ಮ ಅನುಭವವನ್ನು ಹಂಚಿಕೊಂಡರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಮನೀಶ್ ಕೊಠಾರಿ ಅವರು ಸಂಸ್ಥೆಯ ಪರಿಚಯ ಮಾಡಿದರು. ಉಪಾಧ್ಯಕ್ಷೆ ಆರ್. ರಮ್ಯ, ಡಾ. ಸಿ. ಮನೋಹರ್, ಡಾ. ಕೆಎಸ್. ಆನಂದರಾಮ್, ಡಾ. ಮಾನಸ ಇದ್ದರು.