ಶಾಲಾ ನಿರ್ಮಾಣಕ್ಕೆ ಶಾಸಕರ ಚಾಲನೆ
ನೆಲಮಂಗಲ: ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಸಾಮಾಜಿಕ ಕಾರ್ಯ ನಿರ್ವಹಿಸುವ ಸಂಘ- ಸಂಸ್ಥೆಗಳ ಕೊಡುಗೆ ಬಹಳ ಅತ್ಯಗತ್ಯವಾಗಿದೆ ಎಂದು ಶಾಸಕ ಡಾ. ಕೆ.ಶ್ರೀನಿವಾಸೂರ್ತಿ ತಿಳಿಸಿದರು.ಕೋಟೆ ಬೀದಿಯಲ್ಲಿ ಬಿಇಎಲ್ ಕಂಪನಿಯವರು ಸುಮಾರು 75 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿ, ಸುಮಾರು 70 ವರ್ಷಗಳ ಇತಿಹಾಸ ಹೊಂದಿರುವ ಹಳೆಯ ಕಟ್ಟಡ ಹೊಂದಿರುವ ಕೋಟೆಬೀದಿಯ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಾಗೂ ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುತ್ತಿರುವ ಬಿಇಎಲ್ ಕಂಪನಿ ಉತ್ತಮ ಸೇವೆ ನಿರ್ವಹಿಸುತ್ತಿದೆ ಎಂದರು. ಕಂಪನಿ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಕೃಷ್ಣಪ್ಪ ಮಾತನಾಡಿ, ಕಂಪನಿಯು ಶಿಕ್ಷಣ, ಆರೋಗ್ಯ ಮತ್ತು ಪರಿಸರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡು ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ತಿಳಿಸಿದರು.ಶಿಕ್ಷಣ ಇಲಾಖೆಯ ಮಾಜಿ ಉಪನಿರ್ದೇಶಕ ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್, ಕಂಪನಿಯ ಅಧಿಕಾರಿಗಳಾದ ಬದರಿನಾಥ್, ಸಂತೋಷ್ಕುಮಾರ್, ಜೋಶಿ, ಸದಸ್ಯರಾದ ಎಚ್.ಜಿ.ರಾಜು, ಪ್ರಸನ್ನಕುಮಾರ್, ಮುಖಂಡರುಗಳಾದ ಜಲಾಲ್, ರೆಹಮಾನ್, ಅಬ್ದುಲ್ ಆಫೀಜ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯ ಶಿಕ್ಷಕಿ ವಿಜಯಕುಮಾರಿ, ಸಹ ಶಿಕ್ಷಕಿ ಸಿದ್ದಮ್ಮ ಸೇರಿದಂತೆ ಮತ್ತಿತರರು ಇದ್ದರು.