ಸಕ್ರಿಯ ರಾಜಕಾರಣದಿಂದ ದೂರ ಸರಿಯಲ್ಲ: ದೇವೇಗೌಡ
ಕನಕಪುರ: ಸಕ್ರಿಯ ರಾಜಕಾರಣದಿಂದ ಎಂದಿಗೂ ದೂರ ಉಳಿಯುವುದಿಲ್ಲ, ರಾಜಕೀಯವೇ ನನ್ನ ಉಸಿರಾಗಿದ್ದು, ಕೊನೆಯ ಉಸಿರಿನವರೆಗೆ ರೈತಪರ ಜನಪರ ಹೋರಾಟ ನಡೆಸುತ್ತೇನೆ ಕುಹಕಿಗಳ ಟೀಕೆಗೆ ಎಂದೂ ಬೆಲೆ ಕೊಡುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಂಗ್ರಾ ಲೋಕಸಭಾ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರವಾಗಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದರು. ಜೆಡಿಎಸ್ ಮುಖಂಡರುಗಳಾದ ಡಿ.ಎಂ. ವಿಶ್ವನಾಥ್,ನಾರಾಯಣಗೌಡ, ಸಿದ್ಧಮರಿಗೌಡ, ಬಿ.ಎಸ್. ಗೌಡ, ತುಂಗಣಿ ಪುಟ್ಟಸ್ವಾಮಿ, ಚಂದ್ರು, ಚಿನ್ನಸ್ವಾಮಿ, ಕೋಡಿಹಳ್ಳಿ ಗಣೇಶ್, ಸಂಪತ್, ಗೋವಿಂದಯ್ಯ ಮೊದಲಾದವರು ಪಾಲ್ಗೊಂಡಿದ್ದರು.
ದೇವೇಗೌಡರ ಕುಟುಂಬರದವರು ಕಣ್ಣೀರು ಹಾಕಿ ರಾಜಕಾರಣ ನಡೆಸುತ್ತಾರೆ. ಇದೇ ಕೊನೆ ಚುನಾವಣೆ ಎಂದು ಹೇಳುತ್ತಾರೆ ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಉತ್ತರಿಸಿ, ಪ್ರಧಾನಿಯಾಗಿ ಯಾವುದೇ ವಿವಾದಗಳಿಲ್ಲದೆ ಸ್ವಚ್ಛ ಆಡಳಿತವನ್ನು 11 ತಿಂಗಳ ಕಾಲ ನೀಡಿದ ತಾವು, ಮತ್ತೆ ಪ್ರಧಾನಿ ಹುದ್ದೆಗೆ ಲಗ್ಗೆ ಹಾಕಬಹುದೆಂಬ ಸೋನಿಯಾ ಅವರಿಗೆ ಭೀತಿಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್‌ಅನ್ನು ನಿರ್ನಾಮ ಮಾಡಲು ನಡೆಸುತ್ತಿರುವ ಹುನ್ನಾರ ಎಂದಿಗೂ ಫಲ ನೀಡದು ಎಂದರು.
ದೇಶದ 36 ಕೋಟಿ ಜನರಿಗೆ ಮೂರು ರುಪಾಯಿಗೆ ಅಕ್ಕಿ, ಗೋದಿ, ಸಕ್ಕರೆ ವಿತರಿಸಿದ ಹಿರಿಮೆ ತಮ್ಮದಾಗಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರದ ಯುಪಿಎ ಸರ್ಕಾರ ಮಾಡಿರುವ ಹಗರಣಗಳ ಸರಮಾಲೆಯನ್ನು ಮಾಧ್ಯಮಗಳೇ ಅನಾವರಣಗೊಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಬ್ಬ ಮಾಜಿ ಪ್ರಧಾನಿಗೆ ಯಾವ ರೀತಿಯ ಗೌರವ ನೀಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲ. ದೇವರು ಅವರಿಗೆ ಸದ್ಬುದ್ಧಿ ಕೊಡಲಿ ಎಂದು ಹೇಳಿದರು.