'ಉಪಚುನಾವಣೆ ಬಹಿಷ್ಕಾರ ನಾಚಿಕೆಗೇಡಿನ ಸಂಗತಿ'
ಕನಕಪುರ: ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರೇ ಹೆಚ್ಚಾಗಿರುವ ಕನಕಪುರ ತಾಲೂಕಿನ ಮಲ್ಲೇನಹಳ್ಳಿ ಗ್ರಾಮಸ್ಥರು ಬೆಂ.ಗ್ರಾ. ಲೋಕಸಭಾ ಉಪಚುನಾವಣೆ ಬಹಿಷ್ಕರಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ನಿವೃತ್ತ ಜಿಲ್ಲಾಧಿಕಾರಿ, ಕಾಂಗ್ರೆಸ್ ಮುಖಂಡ ಪುಟ್ಟಸ್ವಾಮಿ ಹೇಳಿದ್ದಾರೆ.
ತಾಲೂಕಿನ ಮಲ್ಲೇನಹಳ್ಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಮಾಲೋಜನೆ ನಡೆಸಿದ ಅವರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅಂತಿಮವಾಗಿ ಮಾಜಿ ಜಿಲ್ಲಾಧಿಕಾರಿ ಮಾತಿಗೆ ಬೆಲೆ ಕೊಟ್ಟ ಮಲ್ಲೇನಹಳ್ಳಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ನಿರ್ಧಾರ ಹಿಂಪಡೆದರು.
ಕನಕಪುರ ವಿಧಾನಸಭಾ ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿದ್ದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಹಾರೋಹಳ್ಳಿ ಮರಳವಾಡಿ ಹೋಬಳಿಗಳನ್ನು ನಿರ್ಲಕ್ಷಿಸಿರುವ ಕಾರಣದಿಂದ ಮಲ್ಲೇನಹಳ್ಳಿ ಗ್ರಾಮಸ್ಥರು ಬಹಿಷ್ಕಾರಕ್ಕೆ ಮುಂದಾಗಿದ್ದಾರೆ ಎಂದರು.
ಹೋಬಳಿಯ ಹತ್ತಾರು ಗ್ರಾಮಗಳು ಇಂದಿಗೂ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಕುಡಿಯುವ ನೀರು, ರಸ್ತೆ, ಶೌಚಾಲಯ ಸೌಲಭ್ಯಗಳು ಜನರಿಗೆ ದೊರೆತಿಲ್ಲ. ವಾಹನ ಸೌಲಭ್ಯ ಬೇಕಾದರೂ ಮೂರೂವರೆ ಕಿಮೀ ನಡೆದು ಹೋಗಬೇಕಾದ ಪರಿಸ್ಥಿತಿಯಿದೆ. ಇಲ್ಲಿನ ಕೆರೆ ಕಾಮಗಾರಿ ಅಪೂರ್ಣವಾಗಿದೆ. ಜನ, ಜಾನುವಾರು ನೀರಿಗೆ ಪರದಾಡಬೇಕಾದ ಪರಿಸ್ಥಿತಿಯಿದೆ ಎಂದು ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ ಹೇಳಿದರು.