'ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳಿ'
ಕ.ಪ್ರ.ವಾರ್ತೆ , ರಾಮನಗರ , ಆ.18
ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವ ವಿಚಾರವನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುವ ರಾಜಕೀಯ ಪಕ್ಷಗಳು ಗೆದ್ದ ನಂತರ ಮರೆತುಬಿಡುತ್ತಿವೆ. ಡಾ.ಪರಮಶಿವಯ್ಯ ವರದಿ ಇಲ್ಲವೇ ಎತ್ತಿನಹೊಳೆ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಎಂ.ಶಿವನಂಜಯ್ಯ ಆಗ್ರಹಿಸಿದರು.
ನಗರದ ಮಾವು ಮಾರಾಟ ಮತ್ತು ತೋಟದ ಬೆಳೆಗಾರರ ಸಹಕಾರ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯನ್ನು ಶಾಶ್ವತ ನೀರಾವರಿಯನ್ನಾಗಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದರು.
ಶಾಶ್ವತ ನೀರಾವರಿ ಯೋಜನೆ ಸಂಬಂಧ ಜಿಲ್ಲೆಯ ರೈತರು ತಮ್ಮಲ್ಲಿರುವ ಪ್ರತಿಷ್ಠೆ ಬದಿಗಿರಿಸಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಹೀಗಾದಾಗ ಮಾತ್ರ ಜಿಲ್ಲೆಯ ಕೃಷಿಕ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ತಿಳಿಸಿದರು.
ರೈತರ ಹೆಸರಿನಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹಣ ಲೂಟಿ ಹೊಡೆಯುತ್ತಿದ್ದಾರೆ. ಅನಗತ್ಯ ಕಾಮಗಾರಿಗಳಿಗೆ ಕೋಟ್ಯಂತರ ರುಪಾಯಿ ಯೋಜನೆ ರೂಪಿಸಿ, ಕಮಿಷನ್ ಹೊಡೆಯುವುದು ದಂಧೆಯಾಗಿದೆ. ನರೇಗಾದಲ್ಲಿ 400 ಕೋಟಿ ಲೂಟಿಯಾಗಿದೆ ಎಂದು ಆರೋಪಿಸಿದರು.
5 ವರ್ಷದಿಂದ ಜಿಲ್ಲಾದ್ಯಂತ ಬರ ಆವರಿಸಿದೆ. ಪ್ರಮುಖ ಜಲಾಶಯಗಳು, ಕೆರೆ-ಕಟ್ಟೆಗಳೆಲ್ಲಾ ಬತ್ತಿಹೋಗಿವೆ. ಅಂತರ್ಜಲ ಪಾತಾಳಕ್ಕೆ ಸೇರಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಶ್ವತ ನೀರಾವರಿಯೊಂದೆ ಪರಿಹಾರವಾಗಿದೆ. ಇಲ್ಲದಿದ್ದರೆ ರೈತರು ಕೃಷಿಯಿಂದ ವಿಮುಖರಾಗುವ ಆತಂಕ ಎದುರಾಗಲಿದೆ ಎಂದರು.
ರಾಜ್ಯದ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಹೆಚ್ಚಾಗಿರುವ ನೀರನ್ನು ವೃಥಾ ಸಮುದ್ರಕ್ಕೆ ಹರಿಸಲಾಗುತ್ತಿದೆ. ಇದರಲ್ಲಿ ಸ್ವಲ್ಪ ಭಾಗ ಜಿಲ್ಲೆಗೆ ಹರಿಸಿದಲ್ಲಿ ಜಿಲ್ಲೆಯೂ ಅಚ್ಚಹಸಿರಿನಿಂದ ಕಂಗೊಳಿಸಲಿದೆ. ಇಲ್ಲದಿದ್ದರೆ ಬರದ ದ್ವೀಪವಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ ರೈತ ನಾಯಕರು ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗಬೇಕು. ವೈಯಕ್ತಿಕ ಪ್ರತಿಷ್ಠೆ ಮುಂದಿಟ್ಟುಕೊಂಡು ಇಡೀ ರೈತ ಸಮುದಾಯವನ್ನು ಬಲಿಕೊಡುವುದು ಸರಿಯಲ್ಲ ಎಂದು ಶಿವನಂಜಯ್ಯ ಸಲಹೆ ನೀಡಿದರು. ಸಭೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪ್ರೊ. ಕೆ.ಮಲ್ಲಯ್ಯ, ವೈನ್ ಬೋರ್ಡ್‌ನ ವ್ಯವಸ್ಥಾಪಕ ಡಾ.ಬಿ. ಕೃಷ್ಣ, ರೈತ ಮುಖಂಡರಾದ ಎಂ.ರಾಮು, ಜೋಗಯ್ಯ, ಕೆ.ಮಲ್ಲಯ್ಯ, ಚಿಕ್ಕಬೈರೇಗೌಡ, ವಾಸು, ಕೃಷ್ಣೇಗೌಡ, ಕಾಳೇಗೌಡ, ರಾಮಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.