ಚುನಾವಣೆ ಲಘುವಾಗಿ ಪರಿಗಣಿಸದಿರಿ: ಜಯಮಾಧವ್
ಕ.ಪ್ರ.ವಾರ್ತೆ , ರಾಮನಗರ , ಆ.18
ಆ.21 ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಕಾರ್ಯಕ್ಕೆ ಸೂಕ್ಷ್ಮ ವೀಕ್ಷಕರಾಗಿ ನೇಮಕಗೊಂಡಿರುವ ನೌಕರರಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ತರಬೇತಿ ಕಾರ್ಯಕ್ರಮ ನಡೆಯಿತು.
ಸೂಕ್ಷ್ಮ ವೀಕ್ಷಕರು ನೇರವಾಗಿ ಸಾಮಾನ್ಯ ವೀಕ್ಷಕರ ಅಧೀನಕ್ಕೆ ಒಳಪಡಲಿದೆ. ಚುನಾವಣಾ ಕಾರ್ಯವನ್ನು ಲಘುವಾಗಿ ಪರಿಗಣಿಸದೆ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕು ಎಂದು ತರಬೇತಿ ನೀಡಿದ ಸಹಾಯಕ ಚುನಾವಣಾಧಿಕಾರಿ ಜಯಮಾಧವ್ ಸಲಹೆ ನೀಡಿದರು.
ಸೂಕ್ಷ್ಮ ವೀಕ್ಷಕರು ತಮಗೆ ವಹಿಸಿರುವ ಮತಗಟ್ಟೆಯ ಚುನಾವಣಾ ದಿನದ ವರದಿ ನೇರವಾಗಿ ಆಯಾ ಕ್ಷೇತ್ರದ ವೀಕ್ಷಕರಿಗೆ ಸಲ್ಲಿಸಬೇಕು. ವರದಿ ಸಲ್ಲಿಸುವ ಸಂದರ್ಭ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಬೇಕು. ಒಂದು ಸಣ್ಣ ಲೋಪವೆಸಗಿದರೂ ಆ ಮತಗಟ್ಟೆಗೆ ಮರು ಚುನಾವಣೆ ಮಾಡಬೇಕಿರುತ್ತದೆ. ಇದರಿಂದ ವರದಿಯು ತನ್ನದೇ ಆದ ಮಹತ್ವ ಹೊಂದಿದೆ ಎಂದರು.
ತಾವು ನೇಮಕಗೊಂಡಿರುವ ಮತಗಟ್ಟೆಯಲ್ಲಿ ಚುನಾವಣೆ ದಿನ ಸಂಭವಿಸುವ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಹರಿಸಿ ವರದಿ ತಯಾರಿಸಬೇಕು. ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹಾಗೂ ಚುನಾವಣಾ ನೀತಿ ನಿಯಮಗಳನ್ನು ಅನುಸರಿಸಿರುವ ಬಗ್ಗೆ ವರದಿಯಲ್ಲಿ ನಮೂದಿಸಬೇಕು ಎಂದರು.
ಸೂಕ್ಷ್ಮ ವೀಕ್ಷಕರಾಗಿ ನೇಮಕಗೊಂಡಿರುವವರು ಭಾನುವಾರದಿಂದಲೇ ಚುನಾವಣಾ ಆಯೋಗದ ಅಧೀನಕ್ಕೆ ಒಳಪಡುವರು. ತಮಗೆ ವಹಿಸಿರುವ ಮತಗಟ್ಟೆಗೆ ಕನಿಷ್ಠ ಒಂದು ಗಂಟೆ ಮುಂಚೆ ತೆರಳಬೇಕು. ಮತಗಟ್ಟೆಯಲ್ಲಿ ಯಾವುದೇ ಲೋಪದೋಷಗಳಾದಲ್ಲಿ ಚುನಾವಣಾ ಸಿಬ್ಬಂದಿಗಳೊಂದಿಗೆ ನಿಮ್ಮನ್ನೂ ಜವಾಬ್ದಾರರು ಎಂದು ಪರಿಗಣಿಸಲಾಗುವುದಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದರು.
ಸಾಮಾನ್ಯ ವೀಕ್ಷಕ ರವಿಕಾಂತ್ ಉಪಾಧ್ಯಾಯ ಮಾತನಾಡಿ, ಚುನಾವಣಾ ಕಾರ್ಯವು ಸುಸೂತ್ರವಾಗಿ, ಶಾಂತಿಯುವಾಗಿ ಹಾಗೂ ಚುನಾವಣಾ ಆಯೋಗದ ನಿಯಮಾನುಸಾರ ನಡೆಯುವಂತೆ ನೋಡಿಕೊಳ್ಳುವುದು ವೀಕ್ಷಕರು, ಸೂಕ್ಷ್ಮ ವೀಕ್ಷಕರ ಕರ್ತವ್ಯ. ಚುನಾವಣಾ ಕಾರ್ಯದಲ್ಲಿ ಇವರು ನೇರವಾಗಿ ಭಾಗಿಗಳಾಗುವುದಿಲ್ಲ. ಆದರೆ, ಇವರು ಸಲ್ಲಿಸುವ ವರದಿಗೆ ಹೆಚ್ಚಿನ ಮಹತ್ವವಿದೆ. ಚುನಾವಣೆಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಈ ಕಾರ್ಯವು ಯಶಸ್ವಿಗೊಳ್ಳಲು ಸಹಕರಿಸಬೇಕೆಂದು ಕರೆ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ 52 ಸೂಕ್ಷ್ಮ ವೀಕ್ಷಕರು ಭಾಗವಹಿಸಿದ್ದರು.
21ಕ್ಕೆ ಸಾರ್ವತ್ರಿಕ ರಜೆ
ಆ.21ರಂದು ನಡೆವ ಚುನಾವಣೆಗೆ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು, ಇನ್ನಿತರ ಎಸ್ಟಾಬ್ಲಿಷ್ಮೆಂಟ್ಗಳಲ್ಲಿ ಕಾಯಂ ಅಥವಾ ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ನೆಗೋಷಿಯೇಬಲ್ ಇನ್ಸ್ಟ್ರೂಮೆಂಟ್ಸ್ ಕಾಯ್ದೆ 1881 ಕಲಂ 25ರಡಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 135ಬಿ ಯಡಿ ವೇತನ ಸಹಿತ ರಜೆ ನೀಡಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ವಿ.ಶ್ರೀರಾಮರೆಡ್ಡಿ ಆದೇಶ ಹೊರಡಿಸಿದ್ದಾರೆ.
ಪಂಕಜಕುಮಾರ್ ಪಾಂಡೆ ಭೇಟಿ
ರಾಜ್ಯ ಚುನಾವಣಾ ಅಧಿಕಾರಿ ಪಂಕಜಕುಮಾರ್ ಪಾಂಡೆ ಅವರು ಭಾನುವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಆ.21ರಂದು ನಡೆಯುವ ಉಪ ಚುನಾವಣೆಗೆ ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಕ್ಷೇತ್ರದ ಚುನಾವಣಾಧಿಕಾರಿ ವಿ.ಶ್ರೀರಾಮರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಪಾಂಡೆ ಅವರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಚುನಾವಣಾ ವೀಕ್ಷಕ ರವಿಕಾಂತ್ ಉಪಾಧ್ಯಾಯ, ವಿಜಯ ಸಿಂಗ್, ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹಾಜರಿದ್ದರು.