ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರಧಾನಿ ಹುದ್ದೆಗೆ ಮೋದಿ ಅರ್ಹರಲ್ಲ: ಮೊಯ್ಲಿ

Vishwanath S
Updated On : 19 Aug 2013, 1:02 am

ಕ.ಪ್ರ.ವಾರ್ತೆ , ರಾಮನಗರ , ಆ.18
ದೇಶದ ಪ್ರಧಾನಿ ಹುದ್ದೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅನರ್ಹರು. ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದ ಬಿಜೆಪಿ ಅವನತಿಯು ಉಭಯ ಕ್ಷೇತ್ರಗಳ ಮರು ಚುನಾವಣೆಯಿಂದಲೇ ಪ್ರಾರಂಭವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಟೀಕಿಸಿದರು.
ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತ ವಿವಿಧ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಿಂದ ಹೊರಬರುತ್ತಿವೆ. ಚುನಾವಣೆ ವೇಳೆಗೆ ಬಿಜೆಪಿ ಏಕಾಂಗಿ ಆದರೂ ಅಚ್ಚರಿಪಡುವಂತಿಲ್ಲ ಎಂದು ಅವರು ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಈ ಮೊದಲು ಎನ್‌ಡಿಎ ಮೈತ್ರಿಕೂಟದಲ್ಲಿ 22 ಪಕ್ಷಗಳಿದ್ದವು. ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ ಬೆನ್ನಲ್ಲೇ ಬಿಹಾರದಲ್ಲಿ ನಿತೀಶ್‌ಕುಮಾರ್, ಒರಿಸ್ಸಾದರಲ್ಲಿ ನವೀನ್ ಪಟ್ನಾಯಕ್ ಎನ್‌ಡಿಎ ತೊರೆದಿದ್ದಾರೆ. ಸದ್ಯಕ್ಕೆ ಬಿಜೆಪಿ ಸಂಗಡ ಇರುವುದು 2 ಪಕ್ಷಗಳಷ್ಟೇ ಎಂದರು.
ತತ್ವ ಮರೆತ ಜೆಡಿಎಸ್:  ಬಿಜೆಪಿಯಂತಹ ವಿಭಜನಕಾರಿ ಪಕ್ಷದ ಜತೆಗೆ ಹೊಂದಾಣಿಕೆ ಮುಂದುವರಿಸಲು ಬಹುತೇಕ ಪಕ್ಷಗಳು ಹಿಂಜರಿಯುತ್ತಿವೆ. ಇಂತಹ ಸಂದರ್ಭ ಜೆಡಿಎಸ್ ಮೈತ್ರಿ ಮಾಡಿಕೊಂಡು, ತನ್ನ ತತ್ವ ಮತ್ತು ಸಿದ್ಧಾಂತಗಳನ್ನು ಗಾಳಿಗೆ ತೂರಿದೆ ಎಂದು ವೀರಪ್ಪ ಮೊಯಿಲಿ ಆರೋಪಿಸಿದರು.
ಮೈತ್ರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಪಕ್ಷವು ಪ್ರವಾಹದ ವಿರುದ್ಧ ಈಜುವ ದುಸ್ಸಾಹಸಕ್ಕೆ ಕೈ ಹಾಕಿದೆ. ರಾಜ್ಯದ ಪ್ರಜ್ಞಾವಂತ ಮತದಾರರು ಈ ಮೈತ್ರಿ ಸಹಿಸುವುದಿಲ್ಲ. ಬೆಂಬಲಿಸುವುದೂ ಇಲ್ಲ. ಬಿಜೆಪಿಯಂತೆ ಜೆಡಿಎಸ್ ಕೂಡ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದರು.
ಎಚ್‌ಡಿಕೆ ದುರಾಸೆಯ ಫಲ:  ಜೆಡಿಎಸ್ ರಾಜ್ಯದ ಕೆಲವೇ ಜಿಲ್ಲೆಗಳಿಗೆ ಸೀಮಿತವಾದ ಪಕ್ಷವಾಗಿದೆ. ಉತ್ತರ ಕರ್ನಾಟಕದಲ್ಲಿ ಈ ಪಕ್ಷಕ್ಕೆ ವಿಳಾಸವಿಲ್ಲ. ದುರಾಡಳಿತ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಜತೆ ಹೋಗಿದ್ದಾರೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನಸೇವೆ ಮಾಡುವ ಸದುದ್ದೇಶ ಇದ್ದಿದ್ದರೆ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರಲಿಲ್ಲ. ಮುಖ್ಯಮಂತ್ರಿ ಆಗಬೇಕೆಂಬ ದುರಾಸೆಯಿಂದ ಸಂಸದನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮರು ಚುನಾವಣೆಯನ್ನು ತಂದೊಡ್ಡಿದ್ದಾರೆ ಎಂದು ವೀರಪ್ಪ ಮೊಯಿಲಿ ದೂಷಿಸಿದರು.
ಮೈತ್ರಿಯಿಂದ ಒಗ್ಗಟ್ಟು:  ಜೆಡಿಎಸ್ ಮತ್ತು ಬಿಜೆಪಿ ನಡುವೆ ಆದ ಮೈತ್ರಿ ಫಲವಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಮೂಡಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಿದ್ದು, ಮಂಡ್ಯದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಲ್ಪ ತಡವಾಗಿ ಎಚ್ಚೆತ್ತುಕೊಂಡಿದ್ದಾರೆ ಎಂದು ಅವರು ವಿಶ್ಲೇಷಿಸಿದರು.
ಎರಡೂ ಕ್ಷೇತ್ರಗಳು ಈ ಮೊದಲು ಕಾಂಗ್ರೆಸ್ ಭದ್ರಕೋಟೆ ಆಗಿದ್ದವು. ಕಾರಣಾಂತರಗಳಿಂದ ಸೀಮಿತ ಅವಧಿಯಲ್ಲಿ ಅನ್ಯಪಕ್ಷಗಳ ಕೈ ಮೇಲಾಗಿತ್ತು. ಇದೀಗ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನಿಶ್ಚಿತವಾಗಿದೆ. ಗತವೈಭವ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧ್ರುವೀಕರಣ ಪ್ರಾರಂಭ:  ಪ್ರಸಕ್ತ ಮರು ಚುನಾವಣೆಯಿಂದಾಗಿ ಜಾತ್ಯತೀತ ಶಕ್ತಿಗಳ ಧ್ರುವೀಕರಣ ಪ್ರಾರಂಭಗೊಂಡಿದೆ. ಕೋಮುವಾದಿ ಬಿಜೆಪಿ ಜತೆ ಜೆಡಿಎಸ್ ಕೈ ಜೋಡಿಸಿದ ಪರಿಣಾಮ ಆ ಪಕ್ಷದಲ್ಲಿದ್ದ ಜಾತ್ಯತೀತ ನಿಲುವಿನ ನಾಯಕರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ವೀರಪ್ಪ ಮೊಯಿಲಿ ತಿಳಿಸಿದರು. ಗೋಷ್ಟಿಯಲ್ಲಿ ಸಚಿವ ವಿನಯಕುಮಾರ ಸೊರಕೆ, ಕಾಂಗ್ರೆಸ್ ನಾಯಕರಾದ ಅಮರನಾಥ ಚೌಧರಿ, ಜಿ.ಎ.ಬಾವಾ, ಷಫಿ, ಎ.ಬಿ.ಮಲಕರೆಡ್ಡಿ, ಸಿ.ಎಂ. ಲಿಂಗಪ್ಪ, ಸಯ್ಯದ್ ಜಯಾವುಲ್ಲಾ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement