ಬೆಂ.ಗ್ರಾಂ. ಕ್ಷೇತ್ರ ಅಭಿವೃದ್ಧಿಗೆ ಸುರೇಶ್ ಬೆಂಬಲಿಸಿ: ಸಂಸದ ಧ್ರುವ
ಕನಕಪುರ: ಬೆಂ.ಗ್ರಾ. ಲೋಕಸಭಾ ಕ್ಷೇತ್ರದ ತಾಲೂಕುಗಳು ಸರ್ವಾಂಗೀಣ ಅಭಿವೃದ್ಧಿ ಕಾಣಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಗೆಲುವು ಅನಿವಾರ್ಯ ಎಂದು ಚಾಮರಾಜನಗರ ಸಂಸದ ಧ್ರುವನಾರಾಯಣ್ ಹೇಳಿದ್ದಾರೆ.
ಇಲ್ಲಿನ ಕನಕಪುರದ ಶಾಸಕರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಪುರ ಲೋಕಸಭಾ ಕ್ಷೇತ್ರದ ದಶಕಗಳ ಬೇಡಿಕೆಯಾದ ಬೆಂಗಳೂರು- ಕನಕಪುರ- ಕೊಳ್ಳೇಗಾಲ- ಚಾಮರಾಜನಗರ ರೇಲ್ವೆ ಮಾರ್ಗ ಪ್ರಸಕ್ತ ಕಾಂಗ್ರೆಸ್ ಸರ್ಕಾರದಲ್ಲಿ ನನಸಾಗುವ ನಿರೀಕ್ಷೆಯಿದೆ. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೂ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ. ಉತ್ಸಾಹಿ ಯುವ ಮುಖಂಡ ಡಿ.ಕೆ. ಸುರೇಶ್ ಸಂಸದರಾಗಿ ಆಯ್ಕೆಗೊಂಡರೆ ಯೋಜನೆ ಅತ್ಯಂತ ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.
ಕೇಂದ್ರದ ನೆರವಿನ ಚತುಷ್ಪಥ ರಸ್ತೆಗಳು, ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲು ಅನುಕೂಲವಾಗುತ್ತದೆ. ಲಕ್ಷಾಂತರ ಬಡ ಜನರು ನೆಮ್ಮದಿಯ ಸೂರು ಕಟ್ಟಿಕೊಳ್ಳಲು ಡಿ.ಕೆ. ಸುರೇಶ್ ಗೆಲುವು ನೆರವಾಗಲಿದೆ ಎಂದರು. ಕೆಪಿಸಿಸಿ ಸದಸ್ಯ ಹೊನ್ನಿಗನಹಳ್ಳಿ ಶ್ರೀಕಂಠು ಮಾತನಾಡಿ, ಕಳೆದ ಎರಡು ದಶಕಗಳಿಂದ ಜನಪರವಾಗಿ ಕಾರ್ಯ ನಿರ್ವಹಿಸಿ ಡಿ.ಕೆ.ಶಿವಕುಮಾರ್ ಅವರ ಬೆನ್ನೆಲು ಎಂಬಂತೆ ಅಭ್ಯರ್ಥಿ ಡಿ.ಕೆ.ಸುರೇಶ್ ಸಂಘಟನೆ, ಜನಸೇವೆಯಲ್ಲಿ ತೊಡಗಿದ್ದಾರೆ. ಕಠಿಣ ಪರಿಶ್ರಮದ ವ್ಯಕ್ತಿ. ವಿರೋಧಿಗಳು ನಡೆಸುತ್ತಿರುವ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅವರ ಗೆಲುವು ನಿಶ್ಚಿತ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಪ್ರಕಾಶ್, ಸೆನ್ಸಾರ್ ಮಂಡಳಿ ಸದಸ್ಯ ಕಾವೇರಪ್ಪ ಪಾಲ್ಗೊಂಡಿದ್ದರು.