ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಾರ್ಷಿಕ ಸಭೆ

Vishwanath S
Updated On : 19 Aug 2013, 1:03 am

ಆಲನಹಳ್ಳಿ ಗೃಹನಿರ್ಮಾಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.1ರ ಬೆಳಗ್ಗೆ 11ಕ್ಕೆ ಸಂಘದ ಕಾರ್ಯಾಲಯದಲ್ಲಿ ನಡೆಯಲಿದ್ದು, ಅಧ್ಯಕ್ಷೆ ಕೆ.ಆರ್. ಪ್ರಭಾವತಿ ಅಧ್ಯಕ್ಷತೆ ವಹಿಸುವರು.
ಇಂದು ಬೆವಿಂಕ ಗ್ರಾಹಕರ ಸಭೆ
ಸೂಲಿಬೆಲೆ: ಇಲ್ಲಿನ ನಂದಗುಡಿ ಬೆವಿಂಕ ಉಪವಿಭಾಗದ ವ್ಯಾಪ್ತಿಯ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಯಲ್ಲಿರುವ ಹಳ್ಳಿಗಳಲ್ಲಿನ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟಂತೆ ಆ.19ರಂದು ಗ್ರಾಹಕರ ಸಭೆ ಕರೆಯಲಾಗಿದೆ. ಪ್ರತಿ ತಿಂಗಳ 3ನೇ ಸೋಮವಾರ ಈ ಎರಡು ಹೋಬಳಿ ವ್ಯಾಪ್ತಿಯಲ್ಲಿನ ವಿದ್ಯುತ್ ಗ್ರಾಹಕರ ಸಮಸ್ಯೆಗೆಳಿಗೆ ಅಧಿಕಾರಿಗಳ ಹಂತದಲ್ಲಿ ಪರಿಹಾರ ಕಂಡುಕೊಳ್ಳುವ ಸಂಬಂಧ ಬೆವಿಕಂ ಆವರಣದಲ್ಲಿ ಸಭೆ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ನಡೆಸಲಾಗುವುದು. ಗ್ರಾಹಕರು ಅಹವಾಲು ಸಲ್ಲಿಸಿ ಪರಿಹಾರ ಪಡೆಯಲು ಬೆವಿಕಂ ಸಹಾಯಕ ಕಾರ್ಯಪಾಲಕ (ವಿದ್ಯುತ್) ಎಂಜಿನಿಯರ್ ತಿಳಿಸಿದ್ದಾರೆ.                                                                   
ಫೋಟೋಗ್ರಫಿ ಅಕಾಡೆಮಿಗೆ ಒತ್ತಾಯ
ದೊಡ್ಡಬಳ್ಳಾಪುರ: ಛಾಯಾಗ್ರಾಹಕರನ್ನು ರಾಜ್ಯ ಸರ್ಕಾರ ಅಸಂಘಟಿತ ವಲಯವಾಗಿ ಗುರ್ತಿಸಿ, ಸರ್ಕಾರಿ ಸವಲತ್ತುಗಳನ್ನು ನೀಡಬೇಕು. ರಾಜ್ಯದಲ್ಲಿ ಫೋಟೋಗ್ರಫಿ ಅಕಾಡೆಮಿ ಸ್ಥಾಪಿಸಬೇಕು ಎಂದು ಕರ್ನಾಟಕ ಛಾಯಾಗ್ರಾಹಕರ ಸಂಘ ಆಗ್ರಹಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ಛಾಯಾಗ್ರಾಹಕರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು. ರಾಜ್ಯದಲ್ಲಿ ಪ್ರತಿ ಗ್ರಾಮ ಹಂತದ ಛಾಯಾಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ ಮತ್ತು ಛಾಯಾಗ್ರಹಣದ ಅನನ್ಯತೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ಎಸ್.ಶಶಿಧರ್, ಉಪಾಧ್ಯಕ್ಷ  ನಾಗೇಶ್, ದೇವರಾಜ್, ಪರಮೇಶ್, ಖಜಾಂಚಿ ಸತ್ಯ ಒತ್ತಾಯಿಸಿದ್ದಾರೆ.
ಸಾಹಿತಿಗಳ ಕಾಂಗ್ರೆಸ್ ಪ್ರೇಮ ಪ್ರಶ್ನಾರ್ಹ
ದೊಡ್ಡಬಳ್ಳಾಪುರ: ಸಾಹಿತಿಗಳಾದ ಪ್ರೊ. ಜಿ.ಕೆ. ಗೋವಿಂದರಾವ್, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಪ್ರೊ. ಕೆ.ಮರುಳಸಿದ್ಧಪ್ಪ, ಡಾ. ಎಲ್.ಹನುಮಂತಯ್ಯ ಸೇರಿದಂತೆ ಅನೇಕರು ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸುವುದಾಗಿ ಬಹಿರಂಗ ಹೇಳಿಕೆ ನೀಡಿರುವುದು ಪ್ರಶ್ನಾರ್ಹ ಎಂದು ಕನ್ನಡಪರ ಹೋರಾಟಗಾರ ತ.ನ. ಪ್ರಭುದೇವ್ ಟೀಕಿಸಿದ್ದಾರೆ. ಈ ಬುದ್ಧಿಜೀವಿಗಳು ಆಡಳಿತ ಪಕ್ಷದ ಪರ ಪ್ರಚಾರಕ್ಕೆ ತೊಡಗುವ ಮೂಲಕ ಸರ್ಕಾರದಿಂದ ಸ್ವಾರ್ಥದ ಲಾಭ ನಿರೀಕ್ಷಿಸುತ್ತಿರುವಂತಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯೊಬ್ಬರನ್ನು ಪದಚ್ಯುತಗೊಳಿಸುವ ಸಂದರ್ಭ ಮಠಾಧೀಶರು ಬೀದಿಗೆ ಬಂದು ಪ್ರತಿಭಟಿಸಿದ್ದನ್ನು ಉಗ್ರವಾಗಿ ಖಂಡಿಸಿದ್ದ ಸಾಹಿತಿಗಳು, ಈಗ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುವ ಮೂಲಕ ತಮ್ಮ ಸೋಗಲಾಡಿತನ ಪ್ರದರ್ಶಿಸಿದ್ದಾರೆ ಎಂದಿದ್ದಾರೆ. ಸಾಹಿತಿಗಳು ರಾಜಕೀಯ ಪಕ್ಷದೊಳಗೇ ಬೆರೆತು ಹೋಗಿರುವ ಸಾಹಿತಿಗಳನ್ನು ಹೊರತುಪಡಿಸಿ ಶ್ರೇಷ್ಠ ಚಿಂತಕರೆನಿಸಿಕೊಂಡಿದ್ದ ಜಿಕೆಜಿ ಮತ್ತು ಮರುಳಸಿದ್ಧಪ್ಪ ಅಂತಹವರು ಕೂಡ ಸರ್ಕಾರವನ್ನು ವಹಿಸಿಕೊಂಡು ಮಾತನಾಡುವುದು ಎಷ್ಟು ಸರಿ ಎಂಬುದು ಚರ್ಚಾರ್ಹ. 3 ತಿಂಗಳ ಸರ್ಕಾರದ ಸಾಧನೆ ಅದ್ಭುತ ಎನ್ನುವ ಇವರ ವಸ್ತುನಿಷ್‌ಠ ಅಜೆಂಡಾ ಏನು ಎಂಬುದು ಜನತೆಗೆ ಗೊತ್ತಾಗಬೇಕು ಎಂದಿದ್ದಾರೆ.
ಹಾಡಹಗಲೇ ತೋಟದ ಮನೆ ದೋಚಿದ ಕಳ್ಳರು
ದೊಡ್ಡಬಳ್ಳಾಪುರ: ತಾಲೂಕಿನ ಕುಂಟನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯೊಂದರ ಬಾಗಿಲು ಮುರಿದು ಹಾಡಹಗಲೇ ನಗದು, ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಕುಂಟನಹಳ್ಳಿಯ ನಾರಾಯಣಾಚಾರ್ ಎಂಬವರ ಮನೆಗೆ ನುಗ್ಗಿರುವ ಕಳ್ಳರು ಸುಮಾರು 2.25 ಲಕ್ಷ, 5 ಚಿನ್ನದುಂಗುರಗಳು ಸೇರಿದಂತೆ ಸುಮಾರು 3.2 ಲಕ್ಷ ಮೌಲ್ಯದ ನಗ-ನಾಣ್ಯ ಕದ್ದೊಯ್ದಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಮನೆಯೊಡತಿ ರತ್ನಮ್ಮ, ಮಧ್ಯಾಹ್ನ ಸುಮಾರು 2.30 ಗಂಟೆ ವೇಳೆಗೆ ದನಗಳನ್ನು ಮೇಯಿಸುತ್ತಾ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಬೈಕ್‌ನಲ್ಲಿ ಇಬ್ಬರು ಯುವಕರು ಬಂದು, ಒಬ್ಬ ರಸ್ತೆಯಲ್ಲೇ ನಿಂತ. ಮತ್ತೊಬ್ಬ ತೋಟದತ್ತ ನಡೆದ. ತೋಟದಲ್ಲಿ ಜೋಳದ ಬೆಳೆ ಬೆಳೆಯಲಾಗಿತ್ತು. ಆಗಾಗ್ಗೆ ಗಿರಾಕಿಗಳು ಬೆಳೆ ನೋಡಲು ಬರುವುದುಂಟು. ಹೀಗಾಗಿ ಸುಮ್ಮನಿದ್ದೆ. ಆದರೆ ಅರ್ಧ ಗಂಟೆಯಾದರೂ ಆತ ಹಿಂತಿರುಗಿ ಬಾರದೆ ಇರುವುದು ಕಂಡು ಅನುಮಾನ ಬಂತು. ಆಗ ಮನೆಯತ್ತ ಬಂದು ನೋಡಿದರೆ ಆತ ಬಾಗಿಲು ಮುರಿದು ಒಳಪ್ರವೇಶಿಸಿದ್ದ. ಕೂಡಲೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಕಾಯುತ್ತಾ ನಿಂತಿದ್ದ ಆತನ ಸಹಚರನನ್ನು ಹಿಡಿಯಲು ಯತ್ನಿಸಿದೆ. ಆದರೆ ಆತ ಕೂಡಲೇ ಮೊಬೈಲ್ ಫೋನಿನಲ್ಲಿ ಒಳಗಿದ್ದಾತನಿಗೆ ಕರೆ ಮಾಡಿದ.
ಆತ ಕೈಯಲ್ಲಿ ಕಬ್ಬಿಣದ ಸಲಾಕೆ ಹಿಡಿದುಕೊಂಡು ಹೊರಬಂದವನೇ ತಡೆಯಲೆತ್ನಿಸಿದ ನನ್ನ ಮೇಲೆ ಹಲ್ಲೆ ಯತ್ನ ನಡೆಸಿ ಪರಾರಿಯಾದ. ಬೈಕ್‌ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಆ ಇಬ್ಬರೂ ಹಿಂದಿ ಭಾಷೆಯಲ್ಲಿ ಸಂಭಾಷಿಸುತ್ತಿದ್ದರು ಎಂದು ನಾರಾಯಣಾಚಾರ್ ಪತ್ನಿ ರತ್ನಮ್ಮ ತಿಳಿಸಿದ್ದಾರೆ.
ಸಲಾಕೆಯಿಂದ ಬಾಗಿಲ ಚಿಲಕ ಮುರಿದು, ಒಳಪ್ರವೇಶಿರುವ ದುಷ್ಕರ್ಮಿ 2 ಬೀರುಗಳ ಬಾಗಿಲುಗಳನ್ನು ಮುರಿದು ಹಣ ದೋಚಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಮೇಲೆ ಕಲ್ಲು ಗಾಳಿಯಲ್ಲಿ ಗುಂಡು
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಲುನರಸಾಪುರದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಭಾನುವಾರ ನಡೆದಿದೆ. ಕೆಲ ತಿಂಗಳಿಂದ ಎರಡೂ ಗುಂಪುಗಳೂ ತಣ್ಣಾಗಿದ್ದವು. ಆದರೆ, ಭಾನುವಾರ ಕ್ಷುಲಕ ಕಾರಣಕ್ಕೆ ಮತ್ತೆ ಮಾರಾಮಾರಿಗೆ ಇಳಿದಿದ್ದರು. ವಿಷಯ ತಿಳಿದು ಗ್ರಾಮಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಘರ್ಷಣೆಯಲ್ಲಿ ತೊಡಗಿದ್ದ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟಕ್ಕೆ ಮುಂದಾದರು ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement