ಹಾಡಹಗಲೇ ತೋಟದ ಮನೆ ದೋಚಿದ ಕಳ್ಳರು
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಆ.18
ತಾಲೂಕಿನ ಕುಂಟನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯೊಂದರ ಬಾಗಿಲು ಮುರಿದು ಹಾಡಹಗಲೇ ನಗದು, ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಕುಂಟನಹಳ್ಳಿಯ ನಾರಾಯಣಾಚಾರ್ ಎಂಬವರ ಮನೆಗೆ ನುಗ್ಗಿರುವ ಕಳ್ಳರು ಸುಮಾರು 2.25 ಲಕ್ಷ, 5 ಚಿನ್ನದುಂಗುರಗಳು ಸೇರಿದಂತೆ ಸುಮಾರು 3.2 ಲಕ್ಷ ಮೌಲ್ಯದ ನಗ-ನಾಣ್ಯ ಕದ್ದೊಯ್ದಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಮನೆಯೊಡತಿ ರತ್ನಮ್ಮ, ಮಧ್ಯಾಹ್ನ ಸುಮಾರು 2.30 ಗಂಟೆ ವೇಳೆಗೆ ದನಗಳನ್ನು ಮೇಯಿಸುತ್ತಾ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಬೈಕ್ನಲ್ಲಿ ಇಬ್ಬರು ಯುವಕರು ಬಂದು, ಒಬ್ಬ ರಸ್ತೆಯಲ್ಲೇ ನಿಂತ. ಮತ್ತೊಬ್ಬ ತೋಟದತ್ತ ನಡೆದ. ತೋಟದಲ್ಲಿ ಜೋಳದ ಬೆಳೆ ಬೆಳೆಯಲಾಗಿತ್ತು. ಆಗಾಗ್ಗೆ ಗಿರಾಕಿಗಳು ಬೆಳೆ ನೋಡಲು ಬರುವುದುಂಟು. ಹೀಗಾಗಿ ಸುಮ್ಮನಿದ್ದೆ. ಆದರೆ ಅರ್ಧ ಗಂಟೆಯಾದರೂ ಆತ ಹಿಂತಿರುಗಿ ಬಾರದೆ ಇರುವುದು ಕಂಡು ಅನುಮಾನ ಬಂತು. ಆಗ ಮನೆಯತ್ತ ಬಂದು ನೋಡಿದರೆ ಆತ ಬಾಗಿಲು ಮುರಿದು ಒಳಪ್ರವೇಶಿಸಿದ್ದ. ಕೂಡಲೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಕಾಯುತ್ತಾ ನಿಂತಿದ್ದ ಆತನ ಸಹಚರನನ್ನು ಹಿಡಿಯಲು ಯತ್ನಿಸಿದೆ. ಆದರೆ ಆತ ಕೂಡಲೇ ಮೊಬೈಲ್ ಫೋನಿನಲ್ಲಿ ಒಳಗಿದ್ದಾತನಿಗೆ ಕರೆ ಮಾಡಿದ.
ಆತ ಕೈಯಲ್ಲಿ ಕಬ್ಬಿಣದ ಸಲಾಕೆ ಹಿಡಿದುಕೊಂಡು ಹೊರಬಂದವನೇ ತಡೆಯಲೆತ್ನಿಸಿದ ನನ್ನ ಮೇಲೆ ಹಲ್ಲೆ ಯತ್ನ ನಡೆಸಿ ಪರಾರಿಯಾದ. ಬೈಕ್ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಆ ಇಬ್ಬರೂ ಹಿಂದಿ ಭಾಷೆಯಲ್ಲಿ ಸಂಭಾಷಿಸುತ್ತಿದ್ದರು ಎಂದು ನಾರಾಯಣಾಚಾರ್ ಪತ್ನಿ ರತ್ನಮ್ಮ ತಿಳಿಸಿದ್ದಾರೆ.
ಸಲಾಕೆಯಿಂದ ಬಾಗಿಲ ಚಿಲಕ ಮುರಿದು, ಒಳಪ್ರವೇಶಿರುವ ದುಷ್ಕರ್ಮಿ 2 ಬೀರುಗಳ ಬಾಗಿಲುಗಳನ್ನು ಮುರಿದು ಹಣ ದೋಚಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.