ಉಭಯ ಕುಟುಂಬ ಕುಸ್ತಿಯಲ್ಲಿ ಯಾರು ಕಿಂಗ್
ಕ.ಪ್ರ.ವಾರ್ತೆ ರಾಮನಗರ ಆ.19
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣಾ ಸಮರ ಪಕ್ಕಾ ಗೌಡ್ರ ಗದ್ದಲವಾಗಿದೆ.
ಒಕ್ಕಲಿಗರ ಭದ್ರಕೋಟೆಯಲ್ಲಿ ಅಧಿಪತ್ಯ ಸ್ಥಾಪನೆಗಾಗಿ ಸಮುದಾಯದ ಎರಡು ಕುಟುಂಬಗಳ ನಡುವಿನ ಜಂಗೀಕುಸ್ತಿಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು? ಎಂಬ ಕುತೂಹಲ ಕೆರಳಿದ್ದು, ಇಡೀ ರಾಜ್ಯದ ಚಿತ್ತ ಈ ಕ್ಷೇತ್ರದ ಫಲಿತಾಂಶದತ್ತ ನೆಟ್ಟಿದೆ.
ಮತದಾರರಲ್ಲಿ ನಿರುತ್ಸಾಹ: ಈ ಅನಿರೀಕ್ಷಿತ ಮರು ಚುನಾವಣೆ ಬಗ್ಗೆ ಮತದಾರರಲ್ಲಿ ನಿರುತ್ಸಾಹವಿದೆ. ಆದರೆ, ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ಶತಾಯ ಗತಾಯ ಗೆಲ್ಲಲೇಬೇಕೆಂದು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಟ ನಡೆಸುತ್ತಿವೆ. ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ನಡುವೆ ನಿಕಟ ಸ್ಪರ್ಧೆ ಇದೆ.
ತನ್ನದೇ ತೆಕ್ಕೆಯಲ್ಲಿರುವ ಕ್ಷೇತ್ರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಜೆಡಿಎಸ್ಗೆ ಇದ್ದರೆ, ಸರ್ಕಾರಕ್ಕೆ ನೂರು ದಿನದ ಸಂಭ್ರಮವಿರುವಾಗ ಎದುರಾಗಿರುವ ಈ ಮರು ಚುನಾವಣೆಯಲ್ಲಿ ಸಾಮರ್ಥ್ಯ ಸಾಬೀತಿಗಾಗಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.
ಸೊಸೆ ಗೆಲವಿಗೆ ಗೌಡರ ಪಣ: ಉದ್ದೇಶಿತ ತೃತೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸುವ ಹಂಬಲ ಹೊತ್ತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೊಸೆ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಿ, ಗೆಲವಿಗಾಗಿ ಹೋರಾಡುತ್ತಿದ್ದಾರೆ.
ಸಚಿವ ಸ್ಥಾನ ವಂಚಿತ ಡಿ.ಕೆ.ಶಿವಕುಮಾರ್ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿ, ಬಲ ಪ್ರದರ್ಶನಕ್ಕಾಗಿ ರಣಾಂಗಣದಲ್ಲಿ ಕಾದಾಡುತ್ತಿದ್ದಾರೆ. ಉಭಯ ಪಕ್ಷಗಳಲ್ಲೂ ಕುಟುಂಬ ಗೆಲುವೊಂದೇ ಗುರಿ.
ಹಣ ಹಂಚಿದ ನಿದರ್ಶನ ಇಲ್ಲಿರಲ್ಲ: ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿದ ನಿದರ್ಶನ ಇಲ್ಲಿರಲಿಲ್ಲ. ಈಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಪ್ರತಿ ಮತಕ್ಕೆ ಸರಾಸರಿ ರು. ಒಂದು ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಈಗ ನೋಟಿಲ್ಲದೆ ಓಟಿಲ್ಲ ಎನ್ನುವ ಮತದಾರರ ಧೋರಣೆ ಮನಗಂಡ ಉಭಯ ಪಕ್ಷಗಳು ವಿಧಿಯಿಲ್ಲದೆ ಹಣದ ಹೊಳೆ ಹರಿಸುತ್ತಿವೆ. ಬಳುವಳಿಗಳ ಹಂಚಿಕೆ ಈಗಿಲ್ಲ.ಮದ್ಯದ ಹೊಳೆ ತಪ್ಪಿದೆ: ವಿಧಾನಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯಿಂದ ಪ್ರತಿ ಮತಕ್ಕೆ ರು.500 ರಿಂದ ರು.1 ಸಾವಿರ ಪಡೆದ ಮತದಾರರು ಈಗ ರು.100 ರಿಂದ 200ಕ್ಕೆ ತೃಪ್ತಿಪಡುವಂತಾಗಿದೆ.
ಸಂಹಿತೆ ಜಾರಿಯಿಂದ ಮದ್ಯದ ಹೊಳೆ ಹರಿಯುವುದಷ್ಟೇ ತಪ್ಪಿದೆ. ಒಂದೆಡೆ ಮುಂಗಾರು ಚುರುಕುಗೊಂಡು, ಬಿತ್ತನೆಯಲ್ಲಿ ನಿರತರಾದ ರೈತಾಪಿ ವರ್ಗ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಗರ, ಗ್ರಾಮೀಣ ಮತದಾರರು ಸಮ ಪ್ರಮಾಣದಲ್ಲಿರುವ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕುಸಿಯುವ ಸಾಧ್ಯತೆ ಇದೆ.
ಈ ಹಿಂದಿನ ಬಲಾಬಲ...
ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ 4,93,177 ಸಿ.ಪಿ.ಯೋಗೇಶ್ವರ್ (ಆಗ ಬಿಜೆಪಿ) ವಿರುದ್ಧ 1,30,257 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಯೋಗೇಶ್ವರ್ 3,62,939 ಮತ ಪಡೆದರೆ, ಪುನರಾಯ್ಕೆ ಬಯಸಿದ್ದ ತೇಜಸ್ವಿನಿಗೌಡ 1,92,809 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5,00,947 ಮತಗಳನ್ನು ಪಡೆದಿದ್ದರೆ, ಜೆಡಿಎಸ್ 4,76,664 ಮತಗಳನ್ನು ಗಳಿಸಿದೆ. ಬಿಜೆಪಿ ಮತಗಳಿಕೆ 2,59,954 ಆಗಿದೆ. ಚನ್ನಪಟ್ಟಣದಲ್ಲಷ್ಟೇ ಸ್ಪರ್ಧೆ ಒಡ್ಡಿದ್ದ ಸಮಾಜವಾದಿ ಪಕ್ಷ 80,099 ಮತ, ಕೆಜೆಪಿ 41,094 ಮತಗಳನ್ನು ಪಡೆದಿವೆ.
ಲೋಕಸಭೆ ಕ್ಷೇತ್ರ ವ್ಯಾಪ್ತಿ...
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿನಗರ, ತುಮಕೂರು ಜಿಲ್ಲೆ ಕುಣಿಗಲ್ ವಿಧಾನಸಭಾ ಕ್ಷೇತ್ರಗಳು ಸೇರಿವೆ.
ಸ್ಪರ್ಧಿಗಳು...
ಅನಿತಾ ಕುಮಾರಸ್ವಾಮಿ (ಜೆಡಿಎಸ್), ಡಿ.ಕೆ.ಸುರೇಶ್ (ಕಾಂಗ್ರೆಸ್), ಕುಣಿಗಲ್ ಶಿವಣ್ಣ (ಆರ್ಪಿಐ), ಜೆ.ಟಿ.ಪ್ರಕಾಶ್ (ಜೆಡಿಯು), ಬೂದಯ್ಯ ಬಿ.ಪೂಜೇರಿ (ಕರುನಾಡ ಪಾರ್ಟಿ), ಕೆ.ಎ.ಮೋಹನ್ (ದೇಶೀಯ ಕಾಂಗ್ರೆಸ್), ಕಾಳಯ್ಯ, ಎ.ಚೌರಪ್ಪ, ಜೆ.ನಟರಾಜು, ಮಲ್ಲೇಶ, ಮಾಡಬಾಳ್ ಜಯರಾಮ್, ಟಿ.ಎಂ.ಮಂಚೇಗೌಡ, ಎಸ್.ಸಿದ್ದರಾಮಯ್ಯ (ಪಕ್ಷೇತರರು).
20 ಲಕ್ಷ ಮತದಾರರು...
ಪರಿಷ್ಕೃತ ಪಟ್ಟಿಯಂತೆ ಕ್ಷೇತ್ರದಲ್ಲಿ 10,49,075 ಪುರುಷರು ಮತ್ತು 9,74,816 ಮಹಿಳೆಯರು ಸೇರಿದಂತೆ ಒಟ್ಟಾರೆ 20,23,451 ಮತದಾರರಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಚಾಚಿಕೊಂಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2385 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕ್ಷೇತ್ರದ ಇತಿಹಾಸ...
1967ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. 2008ರ ಮರು ವಿಂಗಡಣೆಯಲ್ಲಿ ಬೆಂ.ಗ್ರಾಮಾಂತರ ಹೊಸ ರೂಪ ಪಡೆದಿದೆ. 12 ಸಾರ್ವತ್ರಿಕ ಮತ್ತು ಒಮ್ಮೆ ಮರು ಚುನಾವಣೆ ನಡೆದಿದೆ. 1996ರವರೆಗೆ ಕಾಂಗ್ರೆಸ್ ಕೋಟೆಯಾಗಿದ್ದ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ಸೇತರ ಮೊದಲ ಸಂಸದ.
2002ರಲ್ಲಿ ಎಂ.ವಿ.ಚಂದ್ರಶೇಖರಮೂರ್ತಿ ನಿಧನ ಕಾರಣಕ್ಕೆ ನಡೆದ ಮರು ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗೆಲವು ಸಾಧಿಸಿದ್ದರು. ಎಂ.ವಿ.ಚಂದ್ರಶೇಖರಮೂರ್ತಿ 6 ಬಾರಿ, ಕುಮಾರಸ್ವಾಮಿ 2 ಬಾರಿ, ಎಂ.ವಿ.ರಾಜಶೇಖರನ್, ಜಾಫರ್ ಷರೀಫ್, ಎಂ.ಶ್ರೀನಿವಾಸ್, ತೇಜಸ್ವಿನಿಗೌಡ,ದೇವೇಗೌಡ ತಲಾ ಒಮ್ಮೆ ಪ್ರತಿನಿಧಿಸಿದ್ದಾರೆ.
ಕುಟುಂಬ ಕದನ ಹಿನ್ನೆಲೆ...
ದೇವೇಗೌಡ- ಶಿವಕುಮಾರ್ ಕುಟುಂಬಗಳ ನಡುವಿನ ಕದನ ಇದೇ ಮೊದಲಲ್ಲ. 1985ರಲ್ಲಿ ಸಾತನೂರಪ ಕ್ಷೇತ್ರದಲ್ಲಿ ದೇವೇಗೌಡ- ಶಿವಕುಮಾರ್, 1999ರಲ್ಲಿ ಅದೇ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮತ್ತು ಶಿವಕುಮಾರ್, 2002ರ ಲೋಕಸಭೆ ಮರು ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಮುಖಾಮುಖಿ ಆಗಿದ್ದರು.
ಸಂಹಿತೆ ಉಲ್ಲಂಘನೆ; 30 ಪ್ರಕರಣ ದಾಖಲು
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 30 ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದರು. ವಿವಿಧ ಪ್ರಕರಣಗಳಡಿ 50 ವಾಹನಗಳನ್ನು ಮುಟ್ಟಗೋಲು ಹಾಕಿಕೊಳ್ಳಲಾಗಿದೆ. ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ ರು.1 ಲಕ್ಷ ಮೌಲ್ಯದ 130 ಬಾಕ್ಸ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಎಡಗೈ ಕಿರು ಬೆರಳಿಗೆ ಶಾಯಿ: ಪ್ರಸಕ್ತ ಲೋಕಸಭಾ ಮರು ಚುನಾವಣೆಯಲ್ಲಿ ಮತದಾರರ ಎಡಗೈ ಕಿರು ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಮಾಡುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಎಂದು ಚುನಾವಣಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದರು.
ಜೆಡಿಎಸ್ ಕೌನ್ಸಿಲರ್ ಮೇಲೆ ಹಲ್ಲೆ: ದೂರು
ಚನ್ನಪಟ್ಟಣ: ಈ ಬಾರಿಯ ಲೋಕಸಭಾ ಉಪ ಚುನಾವಣೆಯಲ್ಲಿ ತಾನು ಹೇಳಿದ ಪಕ್ಷದ ಪರ ಕೆಲಸ ಮಾಡುತ್ತಿಲ್ಲ ಎಂದು ಕುಪಿತ ಗೊಂಡ ಮಾಜಿ ನಗರಸಭಾ ಸದಸ್ಯ ಹಾಗೂ ಆತನ ಮಕ್ಕಳು ಹಾಲಿ ನಗರಸಭಾ ಸದಸ್ಯನ ಮೇಲೆ ಹಲ್ಲೆ ಮಾಡಿರುವ ಘಟನೆ ಪಟ್ಟಣದ 20ನೇ ವಾರ್ಡ್ ನಲ್ಲಿ ನಡೆದಿದೆ.ನಗರಸಭಾ ಸದಸ್ಯ ಹಮೀದ್ ಮುನ್ನಾವರ್ ಹಲ್ಲೆಗೊಳಗಾದ ಸದಸ್ಯನಾಗಿದ್ದು ಇದೇ ವಾರ್ಡ್ನ ಮಾಜಿ ಸದಸ್ಯ ಅಜ್ಗರ್ ಆಲಿ ಮತ್ತವರ ಮಕ್ಕಳು ಹಲ್ಲೆ ಮಾಡಿದ್ದಾರೆ.
ಮಾಜಿ ಸದಸ್ಯ ಅಜ್ಗರ್ ಆಲಿ ಇತ್ತೀಚಿಗೆ ಕಾಂಗ್ರೆಸ್ನೊಂದಿಗೆ ಗುರುತಿಸಿ ಕೊಂಡಿದ್ದರು. ಆದರೆ, ನಗರಸಭಾ ಸದಸ್ಯ ಹಮೀದ್ ಮುನ್ನಾವರ್ ಜೆಡಿಎಸ್ನಿಂದ ಗೆದ್ದಿದ್ದು ಜೆಡಿಎಸ್ ಪರ ಕೆಲಸ ಮಾಡುವುದಾಗಿ ಹೇಳಿದ್ದರಿಂದ ಕುಪಿತಗೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಜೆಡಿಎಸ್ ತಿರಸ್ಕರಿಸಿ: ಮಹದೇವಪ್ಪ ಮನವಿ
ರಾಮನಗರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಂದು ಪುತ್ರ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಪಟ್ಟಾಭಿಷೇಕಕ್ಕಾಗಿ, ಇಂದು ಸೊಸೆ ಗೆಲ್ಲಿಸಬೇಕೆನ್ನುವ ಹಠ ಸಾಧನೆಗಾಗಿ ಬಿಜೆಪಿ ಜತೆ ಕೈ ಜೋಡಿಸುವ ಮೂಲಕ ತತ್ವ, ಸಿದ್ಧಾಂತಕ್ಕೆ ತಿಲಾಂಜಲಿ ಹೇಳಿದ್ದಾರೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದರು. ನಗರದ ಕೃಷ್ಣ ಸ್ಮೃತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ದಲಿತ ಸಂಘಟನೆಗಳ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೋಮುವಾದಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಕಪಟಿ ಜಾತ್ಯತೀತ ಪಕ್ಷವಾದ ಜೆಡಿಎಸ್ಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು. ಸಿ.ನಾರಾಯಣಸ್ವಾಮಿ, ಎಸ್.ಪುಟ್ಟಸ್ವಾಮಿ, ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.
-ಮತ್ತೀಕೆರೆ ಜಯರಾಮ್