ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಹಿರಂಗ ಮತ ಪ್ರಚಾರ ಅಂತ್ಯ

Vishwanath S
Updated On : 20 Aug 2013, 12:59 pm

ಕ.ಪ್ರ.ವಾರ್ತೆ ರಾಮನಗರ ಆ.19
ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರ ಸೋಮವಾರ ಸಂಜೆ 5ಕ್ಕೆ ಅಂತ್ಯಗೊಂಡಿದೆ. ನ್ಯಾಯ ಸಮ್ಮತ ಮತ್ತು ಶಾಂತಯುತ ಚುನಾವಣೆಗೆ ಜಿಲ್ಲಾಡಳಿತ ಸಜ್ಜಾಗಿದ್ದು, ಚುನಾವಣಾ ಕರ್ತವ್ಯಕ್ಕಾಗಿ ಅಧಿಕಾರಿಗಳು ಸಹಿತ 12 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು   ತಿಳಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 5ರಿಂದ ಮತದಾನದ ದಿನ ಆ.21 ಹಾಗೂ ಮತದಾನ ಮುಗಿದ ಮರುದಿನ. ಆ.22ರ ಬೆಳಗ್ಗೆ 6 ರವರೆಗೆ ಕ್ಷೇತ್ರಾದ್ಯಂತ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಒಣ ದಿನ ಘೋಷಣೆಯಾಗಿದ್ದು, ಮದ್ಯ ಮಾರಾಟ ಮತ್ತು ಸಾಗಣೆಯೂ ನಿಷೇಧ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕಾಲ್ನಡಿಗೆ ಪ್ರಚಾರ ಓಕೆ: ಬಹಿರಂಗ ಪ್ರಚಾರ ಮುಗಿದ ತರುವಾಯ ಕ್ಷೇತ್ರದವರಲ್ಲದ ಸ್ಟಾರ್ ಪ್ರಚಾರಕರು, ಮುಖಂಡರು ಮತ್ತು ರಾಜಕೀಯ ಕಾರ್ಯಕರ್ತರು ಕ್ಷೇತ್ರ ತೊರೆಯಬೇಕು. ರೆಸಾರ್ಟ್, ವಸತಿ ಗಣಹ, ಫಾರ್ಮ್ ಹೌಸ್ಸ್‌ಹಿತ ವಿವಿಧೆಡೆ ತಪಾಸಣೆ ನಡೆಸಿ ಹೊರಗಿನವರು ವಾಸ್ತವ್ಯವಿರುವುದು ಕಂಡು ಬಂದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಹಿರಂಗ ಪ್ರಚಾರ ಅಂತ್ಯದ ಬಳಿಕವೂ ಅಭ್ಯರ್ಥಿಗಳು ಕಾಲ್ನಡಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಬಹುದಾಗಿದೆ. ಆದರೆ, ಗುಂಪು ಸೇರಿಕೊಂಡು ಪ್ರಚಾರ ನಡೆಸುವಂತಿಲ್ಲ. ಕ್ಷೇತ್ರದ ಹೊರಗಿನವರನ್ನು ಯಾವ ಕಾರಣಕ್ಕೂ ಪ್ರಚಾರಕ್ಕೆ ಜತೆಯಲ್ಲಿ ಕರೆದೊಯ್ಯುವಂತಿಲ್ಲ ಎಂದು ಶ್ರೀರಾಮರೆಡ್ಡಿ ಸೂಚನೆ ನೀಡಿದ್ದಾರೆ.
2385 ಮತಗಟ್ಟೆಗಳು: ಲೋಕಸಭಾ ಕ್ಷೇತ್ರಾದ್ಯಂತ 2385 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 445 ಅತಿ ಸೂಕ್ಷ್ಮ, 655 ಸೂಕ್ಷ್ಮ, 1285 ಸಾಮಾನ್ಯ ಮತಗಟ್ಟೆ ಗುರ್ತಿಸಲಾಗಿದೆ. ಬಂದೋಬಸ್ತ್‌ಗಾಗಿ ಕೇಂದ್ರ ಮೀಸಲು ಪಡೆ, ರಾಜ್ಯ ಮೀಸಲು ಪಡೆ, ಸ್ಥಳೀಯ ಪೊಲೀಸರು ಮತ್ತು ಹೋಂ ಗಾರ್ಡ್ ಸಿಬ್ಬಂದಿ ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್‌ಪಿ ಅನುಪಮ್ ಅಗ್ರವಾಲ್ ತಿಳಿಸಿದರು.
ಸಂಚಾರಿ ಪೊಲೀಸ್ ತಂಡ: ಅಹಿತಕರ ಘಟನೆಗಳಿಗೆ ಯಾವ ಕಾರಣಕ್ಕೂ ಆಸ್ಪದ ನೀಡಲಾಗದು.1096 ಮುಖ್ಯ ಪೇದೆಗಳು, 1735 ಪೇದೆಗಳು, 2390 ಹೋಂ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಂಚಾರಿ ಪೊಲೀಸ್ ತಂಡವನ್ನೂ ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಸಾರ್ವತ್ರಿಕ ರಜೆ ಘೋಷಣೆ
ಚುನಾವಣೆ ನಡೆಯುತ್ತಿರುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆ.21ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ಖಾಸಗಿ ಉದ್ದಿಮೆಗಳು, ಎಲ್ಲ ಔದ್ಯೋಗಿಕ ಸಂಸ್ಥೆಗಳು, ವ್ಯವಹಾರಿಕ ಸಂಸ್ಥೆಗಳು ಇತರೆ ಉದ್ದಿಮೆಗಳಲ್ಲಿ ಎಲ್ಲ ನೌಕರರಿಗೆ ರಜೆ ನೀಡುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಮನಗರದಲ್ಲೇ ಎಣಿಕೆ
ಮತಗಳ ಎಣಿಕೆಯನ್ನು ಆ.24 ರಂದು ರಾಮನಗರದ ಹೊರ ವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸಲಾಗುತ್ತದೆ. ಮತದಾನದ ಬಳಿಕ ಎಣಿಕೆ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು  ತಿಳಿಸಿದರು.
ಡಿ ಮಸ್ಟರಿಂಗ್ ಕೇಂದ್ರ
ವಿಧಾನಸಭಾ ಕ್ಷೇತ್ರ ಮಟ್ಟದಲ್ಲೇ ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆಯಾ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಗೊತ್ತುಪಡಿಸಲಾದ ಸ್ಥಳದಿಂದ ಮತ ಯಂತ್ರಗಳ ವಿತರಣೆ, ಶೇಖರಣೆಯನ್ನು  ನಡೆಸಲಾಗುತ್ತದೆ.
ಮತದಾನ ಮುಕ್ತಾಯವಾದ ಬಳಿಕ ಎಣಿಕೆ ಕೇಂದ್ರವಾದ ರಾಮನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಸಾಗಿಸಲಾಗುವುದು ಎಂದು ಚುನಾವಣಾಧಿಕಾರಿ ಹೇಳಿದರು.
ಎಲ್ಲೆಲ್ಲಿ ಏನೇನು: ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು, ಚನ್ನಪಟ್ಟಣಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಕನಕಪುರಕ್ಕೆ ರೂರಲ್ ಬಾಲಕಿಯರ ಪ್ರೌಢಶಾಲೆ, ಮಾಗಡಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜರಾಜೇಶ್ವರಿ ನಗರಕ್ಕೆ ಬೆಂಗಳೂರಿನ ಕೆಂಚೇನಹಳ್ಳಿಯ ರಾಜೇಶ್ವರಿ ವಿದ್ಯಾಶಾಲೆ, ಕುಣಿಗಲ್‌ಗೆ  ಸರ್ಕಾರಿ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜು, ಬೆಂಗಳೂರು ದಕ್ಷಿಣಕ್ಕೆ ಜಯನಗರದ ನ್ಯಾಷನಲ್ ಕಾಲೇಜು, ಆನೇಕಲ್‌ಗೆ ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರವಾಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement