ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ಮರೆಯದೆ ಮತದಾನ ಮಾಡಿ...

Vishwanath S
Updated On : 21 Aug 2013, 12:54 pm

ಕ.ಪ್ರ.ವಾರ್ತೆ , ರಾಮನಗರ , ಆ. 20
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಆ. 21 ರಂದು ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಕ್ಷೇತ್ರದ 20.23 ಲಕ್ಷ ಮತದಾರರು 13 ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಲಿದ್ದಾರೆ.
ಆಯಾ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರದಿಂದ ವಿದ್ಯುನ್ಮಾನ ಮತಯಂತ್ರ, ಅಗತ್ಯ ಸಲಕರಣೆಗಳೊಂದಿಗೆ ಸಿಬ್ಬಂದಿ ನಿಯೋಜನೆಗೊಂಡ ಮತಗಟ್ಟೆಗೆ ಸಂಜೆ ವೇಳೆಗೆ ತಲುಪಿದ್ದಾರೆ.
12 ಸಾವಿರಕ್ಕೂ ಹೆಚ್ಚು ಸಿಬ್ಬಂದಿ: ಅಲ್ಪಾವಧಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಮತಗಟ್ಟೆ ಕರ್ತವ್ಯ ಮತ್ತು ಬಂದೋಬಸ್ತ್‌ಗಾಗಿ 12 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
2385 ಮತಗಟ್ಟೆಗಳು: ಲೋಕಸಭಾ ಕ್ಷೇತ್ರದಲ್ಲಿ 2385 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಈ ಪೈಕಿ 445 ಅತಿ ಸೂಕ್ಷ್ಮ, 655 ಸೂಕ್ಷ್ಮ ಮತ್ತು 1285 ಸಾಮಾನ್ಯ ಮತಗಟ್ಟೆಗಳಾಗಿವೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 417 ಮತಗಟ್ಟೆಗಳಿವೆ.  ರಾಜರಾಜೇಶ್ವರಿ ಕ್ಷೇತ್ರದಲ್ಲಿ 331, ಆನೇಕಲ್ ಕ್ಷೇತ್ರದಲ್ಲಿ 274, ಕುಣಿಗಲ್ ಕ್ಷೇತ್ರದಲ್ಲಿ 263, ಮಾಗಡಿಯಲ್ಲಿ 288, ರಾಮನಗರದಲ್ಲಿ 262, ಕನಕಪುರದಲ್ಲಿ 291 ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 259 ಮತಗಟ್ಟೆಗಳಿವೆ.
ಜಿದ್ದಾಜಿದ್ದಿನ ಹೋರಾಟ: ಸಾಂಪ್ರದಾಯಕ ಎದುರಾಳಿಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸೆಣೆಸಾಟ ನಡೆದಿದೆ. ಕುಟುಂಬ ಸದಸ್ಯರನ್ನು ಕಣಕ್ಕೆ ಇಳಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆಲವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.  ನಾಲ್ಕು ಜಿಲ್ಲೆಗಳಲ್ಲಿ ಚಾಚಿಕೊಂಡಿರುವ 8 ವಿಧಾನಸಭಾ ಕ್ಷೇತ್ರಗಳ 20,23,891 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಕಣದಲ್ಲಿ 13 ಅಭ್ಯರ್ಥಿಗಳಿದ್ದರೂ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಡಿ.ಕೆ.ಸುರೇಶ್ ನಡುವೆ ನಿಕಟ ಸ್ಪರ್ಧೆಯಿದೆ.
ಪ್ರಯಾಣಿಕರ ಪರದಾಟ: ಅಧಿಕಾರಿ ಮತ್ತು ನೌಕರರು ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಹಿನ್ನೆಲೆಯಲ್ಲಿ ದೈನಂದಿನ ಕೆಲಸ ಸ್ಥಗಿತಗೊಂಡು, ಸರ್ಕಾರದ ವಿವಿಧ ಇಲಾಖೆ ಕಚೇರಿಗಳು ಬಿಕೋ ಎನ್ನುತ್ತಿದ್ದವು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನ ಸಂದಣಿ, ವ್ಯಾಪಾರ-ವಹಿವಾಟು ಕುಸಿದಿದೆ.  ಚುನಾವಣಾ ಕರ್ತವ್ಯಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾಹನಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಮಾರ್ಗದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಪ್ರಯಾಣಿಕರು, ವಿದ್ಯಾರ್ಥಿಗಳ ಪರದಾಟ ಹೇಳ ತೀರದಾಗಿತ್ತು.  
ಅಧಿಕಾರಿಗಳ ವೀಕ್ಷಣೆ:  ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ವಿದ್ಯುನ್ಮಾನ ಮತಯಂತ್ರಗಳ ವಿತರಣೆ ಪ್ರಕ್ರಿಯೆ, ಆಯ್ದ ಮತಗಟ್ಟೆಗಳಲ್ಲಿ ಮತದಾನಕ್ಕೆ ಕೈಗೊಂಡಿರುವ ಸಿದ್ಧತೆಯನ್ನು ವೀಕ್ಷಕರು ಹಾಗೂ ಚುನಾವಣಾಧಿಕಾರಿ ಪರಿಶೀಲಿಸಿದರು.
ಪೊಲೀಸ್ ಉನ್ನತ ಅಧಿಕಾರಿಗಳು ಸಭೆ ನಡೆಸಿ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಅಧಿಕಾರಿಗಳ ತಂಡ ಕ್ಷೇತ್ರದ ವಿವಿಧೆಡೆ ಸಂಚರಿಸಿ, ತಪಾಸಣೆ ಮುಂದುವರೆಸಿದೆ.
ಮಾತಿನ ಚಕಮಕಿ: ಕನಕಪುರದಲ್ಲಿ ಡೀಸೆಲ್ ಹಣ ಪಾವತಿ ವಿಷಯವಾಗಿ ಅಧಿಕಾರಿಗಳು ಮತ್ತು ಬಾಡಿಗೆ ಕಾರು ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ರಾಮನಗರದ ಬಾಲಾಜಿ ವಸತಿ ಗೃಹದ ಪೊಲೀಸರು ಮತ್ತು ಪುರಪಿತೃ ನೇತೃತ್ವದ ಗುಂಪಿನೊಂದಿಗೆ ವಾಗ್ವಾದ ನಡೆಯಿತು.
ಬೆಳಗ್ಗೆ 8 ರಿಂದ ಸಂಜೆ 5
ಲೋಕಸಭೆ ಉಪ ಚುನಾವಣೆಯಲ್ಲಿ ಮತದಾನದ ಅವಧಿಯನ್ನು ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಚುನಾವಣಾ ಆಯೋಗ ನಿಗದಿಪಡಿಸಿದೆ ಎಂದು ಚುನಾವಣಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.
ಸಮೀಕ್ಷೆಗಳಿಗೆ ನಿರ್ಬಂಧ
ಉಪ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಎಲ್ಲ ರೀತಿಯ ಬಹಿರಂಗ ಪ್ರಚಾರ, ಮತಗಟ್ಟೆ ನಿರ್ಗಮನ ಸಮೀಕ್ಷೆ ಬಿತ್ತರ ಅಥವಾ ಪ್ರಕಟಿಸುವುದನ್ನು ನಿರ್ಬಂಧಿಸಲಾಗಿದೆ. ಜಾಹೀರಾತು ಪ್ರಕಟಣೆ ನಿಷೇಧಿಸಿದೆ.
ಆಧಾರ್‌ಗೂ ಅವಕಾಶ
ಪ್ರಸಕ್ತ ಚುನಾವಣೆಯಲ್ಲಿ ಚುನಾವಣಾ ಆಯೋಗ ನೀಡಿರುವ ಭಾವಚಿತ್ರ ಸಹಿತ ಗುರುತಿನ ಚೀಟಿ ಹೊಂದಿಲ್ಲದವರು ಆಧಾರ್‌ಕಾರ್ಡ್ ಸಹಿತ 23 ಗುರುತಿನ ಚೀಟಿಗಳ ಪೈಕಿ ಒಂದನ್ನು ಹಾಜರುಪಡಿಸಿ, ಮತ ಚಲಾಯಿಸಬಹುದಾಗಿದೆ.  ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಭಾವಚಿತ್ರವುಳ್ಳ ಅಧಿಕೃತ ಮತದಾರರ ಚೀಟಿಗಳನ್ನು ವಿತರಿಸಿದ್ದಾರೆ. ಅದನ್ನೂ ಗುರುತಿನ ಚೀಟಿಯಾಗಿ ಬಳಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಕ್ಯಾಮೆರಾ ಒಯ್ಯುವಂತಿಲ್ಲ
ಮತದಾರರು ಸಹಿತ ಮತಗಟ್ಟೆಗೆ ತೆರಳುವವರು ಯಾವ ಕಾರಣಕ್ಕೂ ಕ್ಯಾಮೆರಾ, ಮೊಬೈಲಲ್ಕೊಂಡೊಯ್ಯುವಂತಿಲ್ಲ. ಮತಗಟ್ಟೆ ಒಳಗೆ ಛಾಯಾಚಿತ್ರ ತೆಗೆಯುವುದು, ಚಿತ್ರೀಕರಣ ಮಾಡುವುದು ಕೂಡದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.  
ಮಾಹಿತಿ ನೀಡಲು ಕೋರಿಕೆ
ಮತದಾನ ದಿನದಂದು ಯಾವುದೇ ಚುನಾವಣಾ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ಚುನಾವಣಾಧಿಕಾರಿ, ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿ, ಸಾಮಾನ್ಯ ವೀಕ್ಷಕರು, ಆಯಾ ತಾಲೂಕು ತಹಸೀಲ್ದಾರ್ ಸಂಪರ್ಕಿಸಿ ಮಾಹಿತಿ ನೀಡಲು ಚುನಾವಣಾಧಿಕಾರಿ ಕೋರಿದ್ದಾರೆ.
ಆನೇಕಲ್: ಮತದಾನಕ್ಕೆ ಸಕಲ ಸಿದ್ಧತೆ
ಆನೇಕಲ್ಲು: ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಉಪ ಚುನಾವಣಾಧಿಕಾರಿ ಪ್ರಭುಲಿಂಗ್ ಕವಲಿಕಟ್ಟಿ ಮನವಿ ಮಾಡಿದ್ದಾರೆ. ಅವರು ತಾಲೂಕಿನ ಚಂದಾಪುರದ ಕಚೇರಿಯಲ್ಲಿ ಮತದಾನಕ್ಕೆ ಪೂರ್ವ ಸಿದ್ಧತೆ ಅಂಗವಾಗಿ ಚುನಾವಣಾಧಿಕಾರಿಗಳಿಗೆ ಮಸ್ಟರಿಂಗ್ ಕಿಟ್ ಮತ್ತು ಇತರ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು. ಶಾಂತಿಯುತ ಮತದಾನಕ್ಕೆ 574  ಪೊಲೀಸರು ಹಾಗೂ ಹೋಂ ಗಾರ್ಡ್‌ಗಳು ಸೇರಿದಂತೆ ಸಿದ್ಧತೆ ಮಾಡಲಾಗಿದೆ. 1381 ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿದ್ದು 51 ವಾಹನಗಳನ್ನು ಸೇವೆಗೆ ಸಜ್ಜುಗೊಳಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 2,70,979 ಮತದಾರರಿದ್ದು 1,43,784 ಪುರಷರು ಹಾಗೂ 1,27,195 ಮಹಿಳೆಯರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement