ಕೀಟ, ರೋಗಬಾಧೆ; ರೈತರಿಗೆ ಸೂಚನೆ
ರಾಮನಗರ: ಜಿಲ್ಲೆಯಾದ್ಯಂತ ಬಿತ್ತನೆ ಮಾಡಿರುವ ತೊಗರಿ, ಅಲಸಂದೆ, ನೆಲಗಡಲೆ ಮತ್ತು ಅವರೆ ಬೆಳೆಗೆ ಕೀಟ ಮತ್ತು ರೋಗಬಾಧೆ ತಗಲಿರುವುದು ಕಂಡುಬಂದಿದೆ. ಆಯಾ ಬೆಳೆಗಳಿಗೆ ಸೂಚಿಸಿರುವಂತೆ ಸಸ್ಯ ಸಂರಕ್ಷಣೆ ಕ್ರಮ ಕೈಗೊಳ್ಳಲು ರೈತರಿಗೆ ತಿಳಿಸಲಾಗಿದೆ.
ತೊಗರಿ: ಬೇರು ಕೊಳೆ ರೋಗ ಮತ್ತು ಸೊರಗು ರೋಗ ತಗಲಿರುವುದು ಕಂಡುಬಂದಿದೆ. ಈ ರೋಗವು ಶಿಲೀಂದ್ರ ರೋಗವಾಗಿದ್ದು, ಮಣ್ಣಿನಲ್ಲಿರುವ ಶಿಲೀಂದ್ರಗಳಿಂದ ಅದರಲ್ಲೂ ತೇವಾಂಶ ಹೆಚ್ಚಾಗಿದ್ದಾಗ ಮತ್ತು ನೀರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿದಾಡುವುದರಿಂದ ಗಿಡದಿಂದ ಗಿಡಕ್ಕೆ ರೋಗಬಾಧೆ ತಗಲುತ್ತದೆ. ಆದ್ದರಿಂದ ಈಗಾಗಲೇ ರೋಗಕ್ಕೆ ತುತ್ತಾದ ಗಿಡಗಳನ್ನು ಬೇರು ಸಹಿತ ತೆಗೆದು ನಾಶಮಾಡುವುದು. ಆ ಗಿಡದ ಬುಡಕ್ಕೆ ಮತ್ತು ಅಕ್ಕಪಕ್ಕದ ಗಿಡದ ಬುಡಕ್ಕೆ 2 ಗ್ರಾಂ ಕಾರ್ಬೆಂಡಜಿಮ್ ಔಷಧವನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.
ನೆಲಗಡಲೆ: ಬೆಳೆಗೆ ಸುರುಳಿಪೂಚಿ ಕೀಟ, ಎಲೆತುಕ್ಕು ರೋಗ ಹಾಗೂ ಕತ್ತು ಕೊಳೆ ರೋಗ ತಗುಲಿಕೆಯಲ್ಲಿ ಕೀಟ ನಿವಾರಣೆಗೆ 1.5 ಮಿಲಿ ಮಾನೋಕ್ರೋಟೋಫಾಸ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಕತ್ತು ಕೊಳೆ ರೋಗ ನಿವಾರಣೆಗೆ 2 ಗ್ರಾಂ ಕಾರ್ಬೆಂಡ್ ಜಿಮ್ರೋಗ ನಾಶಕವನ್ನು ಒಂದು ಲೀಟರ್‌ಗೆ ಮಿಶ್ರಣ ಮಾಡಿ ಸಿಂಪಡಿಸುವುದು. ಎಲೆತುಕ್ಕು ರೋಗ ನಿವಾರಣೆಗೆ 0.5 ಮಿಲಿ ಟ್ರೈಡೆಮಾರ್ಫ್ ಅಥವಾ ಕಾರ್ಬಾನಿಕ್ ಆಗನಾಶಕವನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.
ಅಲಸಂದೆ: ಸಸ್ಯ ಹೇನು, ಸುರುಳಿಪೂಚಿ ಕೀಟ ಮತ್ತು ಎಲೆತುಕ್ಕು ರೋಗ ತಗಲಿರುವುದು ಕಂಡುಬಂದಿದೆ. ಕೀಟಬಾಧೆ ತಡೆಗಟ್ಟಲು ಡೈಮಿಥೊಯೇಟ್ ಒಂದು ಲೀಟರ್ ನೀರಿಗೆ 2 ಮಿಲಿ ಮಿಶ್ರಣ ಮಾಡಿ ಸಿಂಪಡಿಸುವುದು. ಎಲೆತುಕ್ಕು ರೋಗ ನಿವಾರಣೆಗೆ ನೇಟಿಓ-759 ರೋಗನಾಶಕವನ್ನು ಒಂದು ಲೀಟರ್ ನೀರಿಗೆ 0.5 ಗ್ರಾಂ. ಮಿಶ್ರಣ ಮಾಡಿ ಸಿಂಪಡಿಸುವುದು.
ಅವರೆ: ಸಸ್ಯ ಹೇನು ಮತ್ತು ಸುರುಳಿಪೂಚಿ ಕೀಟ ತಗಲಿರುವುದು ಕಂಡುಬಂದಿದೆ. ಈ ಕೀಟಗಳ ನಿವಾರಣೆಗೆ 2 ಮಿಲಿ ಡೈಮಿಥೊಯೇಟ್ ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಲು ಕೃಷಿ ಜಂಟಿ ನಿರ್ದೇಶಕ ಅಣ್ಣಯ್ಯ ಕೋರಿದ್ದಾರೆ.