ಸಮಾನತೆ ಸಾರುವ ಸಾಹಿತ್ಯ ಹೊರಬರಲಿ
ರಾಮನಗರ: ಸಮಾನತೆಯ ಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ಮೌಲ್ಯಯುತ ಸಾಹಿತ್ಯದ ರಚನೆಗೆ ಸಾಹಿತಿಗಳು ಮುಂದಾಗಬೇಕು ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಚಲುವರಾಜು ಮತ್ತೀಕೆರೆ ರಚಿಸಿರುವ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮನುಷ್ಯ ಎಷ್ಟೇ ಮುಂದುವರಿದಿದ್ದರೂ ಸಮಾಜದಲ್ಲಿ ಅಸಮಾನತೆ, ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಇದನ್ನು ತಪ್ಪಿಸುವುದು ಮೌಲ್ಯಾಧಾರಿತ ಸಾಹಿತ್ಯದ ಓದಿನಿಂದ ಸಾಧ್ಯವಾಗಲಿದೆ ಎಂದರು.
ಓದುವ ಪ್ರವೃತ್ತಿ ಹೆಚ್ಚಲಿ: ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದುವ ಅಭ್ಯಾಸ ತೀರಾ ಕಡಿಮೆಯಾಗಿದೆ. ಉತ್ತಮ ಪುಸ್ತಕಗಳಿಂದ ಓದುವ ಪ್ರವೃತ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸಾಹಿತ್ಯ ಪರಂಪರೆಯ ಬಗ್ಗೆ ತಿಳಿಸಿ ಅವರಲ್ಲಿ ಕುತೂಹಲ ಮೂಡಿಸಿದಾಗ ಓದುವ ಸಂಸ್ಕೃತಿ ಬೆಳೆಯುತ್ತದೆ ಎಂದು ತಿಳಿಸಿದರು.
ಜಾಗತೀಕರಣದ ಜಾಲ: ಜಾಗತೀಕರಣದ ಜಾಲಕ್ಕೆ ಸಿಲುಕಿರುವ ಕನ್ನಡ ನಾಡು ವ್ಯಾವಹಾರಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಭಾಷಿಕ ಪ್ರಹಾರಕ್ಕೆ ತುತ್ತಾಗಿದೆ. ಇದರಿಂದಾಗಿ ಕನ್ನಡ ಭಾಷೆಯ ಬೆಳವಣಿಗೆಯು ಬಿಕ್ಕಟ್ಟಿಗೆ ಸಿಲುಕಿದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಆತಂಕ ವ್ಯಕ್ತಪಡಿಸಿದರು.
ಕನ್ನಡ ಭಾಷೆ ಭವಿಷ್ಯ ರೂಪಿಸಿಕೊಡಲಾರದೆನ್ನುವ ಭ್ರಮೆ ಇಂದು ಜನರನ್ನು ಆವರಿಸಿಕೊಂಡಿದೆ. ಇದರಿಂದಾಗಿ ಪ್ರಾಚೀನ ಕನ್ನಡ ಭಾಷೆಯು ಆತಂಕದ ಭಾಷೆಯಾಗಿ ಕಾಣುತ್ತಿದೆ ಇದು ನಿಜಕ್ಕೂ ಆತಂಕದ ಸಂಗತಿ ಎಂದು ತಿಳಿಸಿದರು.
ಕೂಡ್ಲೂರು ವೆಂಕಟಪ್ಪ ಮೆಚ್ಚುಗೆ: ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡವರು ತಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗುತ್ತಾರೆ. 15 ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪರಿಚಿತರಾಗಿರುವ ಚಲುವರಾಜು ತಮ್ಮ ಕೆಲಸದ ಜತೆಗೆ ಸಾಮಾಜಿಕ ಪ್ರಜ್ಞೆಯ ತಮ್ಮ ಅನುಭವ ದ್ರವ್ಯವನ್ನು ಸಾಹಿತ್ಯ ಕ್ಷೇತ್ರದಲ್ಲಿ ದಾಖಲಿಸಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ ಎಂದು ಸಾಹಿತಿ ಡಾ.ಕೂಡ್ಲೂರು ವೆಂಕಟಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಚಲುವರಾಜು ಮತ್ತೀಕೆರೆ ಅವರ ಕೃಷ್ಣಲೀಲೆ, ನಾವು ಮತ್ತು ನ್ಯಾಯ, ಆಣಿಮುತ್ತು ಖಜಾನಾ ಎಂಬ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಗಾಯಕ ಬಿ.ವಿನಯ್ಕುಮಾರ್ ಮತ್ತು ತಂಡದವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.
ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಆರ್.ಕುಮಾರಸ್ವಾಮಿ, ಲೇಖಕ ಚಲುವರಾಜು ಮತ್ತೀಕೆರೆ, ಸಾಹಿತಿ ಸಿಸಿರಾ, ನಾಗಭೂಷಣ್, ಬಿ.ಟಿ. ಚಿಕ್ಕಪುಟ್ಟೇಗೌಡ ಮತ್ತಿತರರು ಭಾಗವಹಿಸಿದ್ದರು.