ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

16 ಕಡೆ ಮತಯಂತ್ರ ಬದಲಾವಣೆ

Vishwanath S
Updated On : 22 Aug 2013, 1:04 am

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 17 ಕಡೆ ವಿದ್ಯುನ್ಮಾನ ಮತ ಯಂತ್ರಗಳು ಕೈಕೊಟ್ಟಿದ್ದು, ಮತದಾನಕ್ಕೆ ಅಡ್ಡಿಯಾಗಿತ್ತು. ಈ ಪೈಕಿ ಒಂದನ್ನು ಮತಗಟ್ಟೆಯಲ್ಲೇ ದುರಸ್ತಿಪಡಿಸಿದ್ದು, 6 ಮತ ಯಂತ್ರಗಳನ್ನು ಬದಲಿಸಿ ಮತದಾನ ಮುಂದುವರೆಸಲಾಯಿತು.  ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಂಚೇಗೌಡನ ಪಾಳ್ಯದ ಮತಗಟ್ಟೆ ಸಂಖ್ಯೆ 43, ಐಜೂರು ಮತಗಟ್ಟೆ ಸಂಖ್ಯೆ 100, ಆನೇಕಲ್ ಕ್ಷೇತ್ರದ ಕೂಡ್ಲು ಮತಗಟ್ಟೆ ಸಂಖ್ಯೆ 1, ರಾಜರಾಜೇಶ್ವರಿ ನಗರ ಕ್ಷೇತ್ರದ ಮತಗಟ್ಟೆ ಸಂಖ್ಯೆ 55, 31, 66, 211, 55, 267, ಕುಣಿಗಲ್ ಕ್ಷೇತ್ರದ ಗುನ್ನಾಗೆರೆ ಮತಗಟ್ಟೆ ಸಂಖ್ಯೆ 19, ಜಾಣಗೆರೆ ಮತಗಟ್ಟೆ ಸಂಖ್ಯೆ 28, ತರೀಕೆರೆ ಮತಗಟ್ಟೆ ಸಂಖ್ಯೆ 142, ಕನಕಪುರ ಕ್ಷೇತ್ರದ ಮತಗಟ್ಟೆ ಸಂಖ್ಯೆ 52, 111, 196, 123 ಇಲ್ಲಿ ಮತ ಯಂತ್ರಗಳನ್ನು ಬದಲಿಸಲಾಗಿದೆ.
ಗಣ್ಯರ ಮತದಾನ

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪತಿ ಎಚ್.ಡಿ.ಕುಮಾರಸ್ವಾಮಿ ಜತೆಗೂಡಿ ರಾಮನಗರ ತಾಲೂಕಿನ ಕೇತಿಗಾನಹಳ್ಳಿಯ ಮತಗಟ್ಟೆಯಲ್ಲಿ ಮಧ್ಯಾಹ್ನದ ವೇಳೆಗೆ ಮತ ಚಲಾಯಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಕನಕಪುರ ತಾಲೂಕಿನ ಸ್ವಗ್ರಾಮ ದೊಡ್ಡಾಲಹಳ್ಳಿಯಲ್ಲಿ ಮತ ಹಾಕಿದರು. ಅದೇ ಮತಗಟ್ಟೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಜತೆ ಆಗಮಿಸಿ ಮತದಾನ ಮಾಡಿದರು.
ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಚನ್ನಪಟ್ಟಣದ ಚಕ್ಕೆರೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಚನ್ನಪಟ್ಟಣದಲ್ಲಿ ಮಾಜಿ ಶಾಸಕರಾದ ಸಾದತ್ ಆಲಿ ಖಾನ್, ಎಂ.ಸಿ.ಅಶ್ವಥ್ ಮತ ಚಲಾಯಿಸಿದರು. ಮಾಗಡಿಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಹುಲಿಕಟ್ಟೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ, ರಾಮನಗರದಲ್ಲಿ ವಿಧಾನಪರಿಷತ್ ಸದಸ್ಯ ಅಪ್ಸರ್ ಆಗಾ, ಮಾಜಿ ಶಾಸಕ ಕೆ.ರಾಜು, ಇಟ್ಟಮಡುವಿನಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆಂಪೇಗೌಡನದೊಡ್ಡಿ ಯಲ್ಲಿ ಮರಿದೇವರು ಮತ ಹಾಕಿದರು.
ಎಚ್ಚೆತ್ತ ಡಿಕೆಶಿ ದಂಪತಿ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಪತ್ನಿ ಉಷಾ ಒಟ್ಟಿಗೇ ಮತ ಚಲಾಯಿಸಿದ್ದರು. ಮತದಾನದ ರಹಸ್ಯ ಬಯಲಾಯಿತೆಂದು ಶಿವಕುಮಾರ್ ಒಟ್ಟಾರೆ ಮತ ಗಳಿಕೆಯ ಪೈಕಿ 2 ಮತಗಳನ್ನು ಲೆಕ್ಕಕ್ಕೆ ಪರಿಗಣಿಸಿರಲಿಲ್ಲ.  ಅಂತೆಯೇ ಆಗಿನ ಮತಗಟ್ಟೆ ಅಧಿಕಾರಿ ಸೇವೆಯಿಂದ ಅಮಾನತುಗೊಂಡಿದ್ದರು. ಈ ವಿಷಯ ತಿಳಿದಿದ್ದ ಪ್ರಸಕ್ತ ಚುನಾವಣೆಯ ಮತಗಟ್ಟೆ ಅಧಿಕಾರಿಯು ಡಿಕೆಶಿ ದಂಪತಿ ಮತ ಚಲಾವಣೆ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಮತಗಟ್ಟೆ ಪ್ರವೇಶಾವಕಾಶ ನಿರಾಕರಿಸಿದ್ದರು.  ಮತದಾನಕ್ಕೆ ಆಗಮಿಸಿದ ಶಿವಕುಮಾರ್ ಹಿಂದಿನ ಘಟನೆ ಮೆಲಕು ಹಾಕಿಕೊಂಡೇ ಮತಗಟ್ಟೆಗೆ ತೆರಳಿದರು. ಮತಗಟ್ಟೆಯಲ್ಲಿ ಶಿವಕುಮಾರ್ ಮತ್ತು ಉಷಾ ಪ್ರತ್ಯೇಕವಾಗಿ ಮತ ಚಲಾಯಿಸಿ, ಹೊರಗೆ ಬಂದು ಬೆರಳಿಗೆ ಹಚ್ಚಿಸಿಕೊಂಡಿದ್ದ ಶಾಯಿಯ ಗುರುತು ಪ್ರದರ್ಶಿಸಿದರು. 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement