ಬೆಂಗಳೂರು ಗ್ರಾಮಾಂತರ: ಶೇ. 56 ಮತದಾನ
ಕ.ಪ್ರ.ವಾರ್ತೆ , ರಾಮನಗರ , ಆ. 21
ಕೊಂಚ ಮಟ್ಟಿನ ನೀರಸ ಪ್ರಕ್ರಿಯೆ, ಅಲ್ಲಲ್ಲಿ ಮಾತಿನ ಚಕಮಕಿ ಮತ್ತು ಸಣ್ಣಪುಟ್ಟ ಅಹಿತಕರ ಘಟನೆಗಳ ಹೊರತಾಗಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮರು ಚುನಾವಣೆ ಬಹುತೇಕ ಶಾಂತಯುತವಾಗಿ ನಡೆದಿದೆ. ಇಲ್ಲಿ ಸುಮಾರು ಶೇ.56 ರಷ್ಟು ಮತದಾನವಾಗಿದೆ.
ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಸೇರಿದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 67, ಚನ್ನಪಟ್ಟಣ 68, ಮಾಗಡಿ 70.50, ಕನಕಪುರ 71.50, ಕುಣಿಗಲ್ 63.39, ಆನೇಕಲ್ 43, ಬೆಂಗಳೂರು ದಕ್ಷಿಣ 28 ಹಾಗೂ ರಾಜರಾಜೇಶ್ವರಿ ನಗರದಲ್ಲಿ 32.77ರಷ್ಟು ಪ್ರಮಾಣದಲ್ಲಿ ಮತದಾನವಾಗಿದೆ.
2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇಕಡ 58.91ರಷ್ಟು ಮತದಾನವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯು ಶೇಕಡ 83ರಷ್ಟು ಮತದಾನದೊಂದಿಗೆ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದ್ದವು.
ಗ್ರಾಮೀಣರ ಮೇಲುಗೈ
ಮತ ಚಲಾವಣೆಯಲ್ಲಿ ಗ್ರಾಮೀಣ ಮತದಾರರದ್ದೇ ಮೈಲುಗೈ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಮಧ್ಯಾಹ್ನದವರೆಗೆ ಮಂದಗತಿಯಲ್ಲಿ ಸಾಗಿದ ಮತದಾನ ಕಡೆಯ ಎರಡು ತಾಸಿನಲ್ಲಿ ಚುರುಕುಗೊಂಡಿದೆ.
ಮತದಾನ ಬೆಳಗ್ಗೆ 8ಕ್ಕೆ ಪ್ರಾರಂಭಗೊಂಡಿತು. 2 ತಾಸಿನ ಬಳಿಕ ಅಂದರೆ ಬೆಳಗ್ಗೆ 10ಕ್ಕೆ ಶೇಕಡ 6.25ರಷ್ಟಾಗಿದ್ದರೆ, ಮಧ್ಯಾಹ್ನ 12ಕ್ಕೆ ಶೇಕಡ 14ಕ್ಕೆ ಏರಿತು. ಮಧ್ಯಾಹ್ನ 2ರ ವೇಳೆಗೆ ಶೇಕಡ 30 ಮತ್ತು ಸಂಜೆ 4ಕ್ಕೆ ಶೇಕಡ 40ರಷ್ಟು ಮತದಾನವಾಗಿತ್ತು.
ಕಡೆಯ ಒಂದು ತಾಸಿನಲ್ಲಿ ಮತದಾನದ ಪ್ರಮಾಣ ಇನ್ನೂ ತೀವ್ರ ಮಟ್ಟದ ಏರುಗತಿಯಲ್ಲಿ ಸಾಗಿತು. ಒಂದೇ ತಾಸಿನ ಅವಧಿಯಲ್ಲಿ ಅತಿ ಹೆಚ್ಚಿನ ಮತದಾರರು ಮತ ಚಲಾಯಿಸಿರುವುದು ಈ ಬಾರಿ ಚುನಾವಣೆಯ ವಿಶೇಷವಾಗಿದೆ.
ಬಿಗಿ ಬಂದೋಬಸ್ತ್: ಜಿದ್ದಾಜಿದ್ದಿನ ಅಖಾಡವಾಗಿದ್ದ ಮರು ಚುನಾವಣೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಮೀಸಲು ಪಡೆ, ಡಿಎಆರ್ ಮತ್ತು ಸ್ಥಳೀಯ ಪೊಲೀಸರು ಸಹಿತ 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ಷೇತ್ರಕ್ಕೆ ನಿಯೋಜಿಸಲಾಗಿತ್ತು. ಕೇಂದ್ರ ವಲಯ ಮತ್ತು ವ್ಯಾಪ್ತಿಯ 3 ಜಿಲ್ಲೆಗಳ ಜಿಲ್ಲೆಗಳ ಪೊಲೀಸ್ ಉನ್ನತಾಧಿಕಾರಿಗಳು ಕ್ಷೇತ್ರದ ವಿವಿಧೆಡೆ ಭೇಟಿ ನೀಡಿ ಬಂದೋಬಸ್ ್ಮಲ್ವೀಚಾರಣೆ ನಡೆಸಿದರು.
ವೀಕ್ಷಕರ ಸಂಚಾರ: ಪ್ರಸಕ್ತ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಅಷ್ಟೇನೂ ಪರಿಣಾಮಕಾರಿ ಆಗಿರಲಿಲ್ಲವಾದರೂ ಚುನಾವಣಾ ಕರ್ತವ್ಯದ ಮೇರೆಗೆ ಅಡ್ಡಾಡಿದ ವಾಹನಗಳ ಸಂಖ್ಯೆ ಜೋರಾಗಿಯೇ ಇತ್ತು. ವೀಕ್ಷಕರು, ಅಧಿಕಾರಿಗಳ ತಂಡ ಅಲ್ಲಲ್ಲಿ ಸಂಚರಿಸಿ ಕೈ ತೊಳೆದುಕೊಂಡಿದ್ದಾರೆ.
ಜಿಲ್ಲಾಡಳಿತ ಕಚೇರಿ ಮತ್ತು ಆಯಾ ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿತ್ತು. ದೂರವಾಣಿ ಸಂಖ್ಯೆಗಳ ವಿವರವನ್ನು ಮಾಧ್ಯಮಗಳಲ್ಲಿ ಪ್ರಚುರಪಡಿಸಲಾಗಿತ್ತು. ಇಷ್ಟಾಗಿಯೂ ಚುನಾವಣಾ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆ ಕುರಿತ ದೂರುಗಳೇ ಬಾರದೆ ಅಧಿಕಾರಿಗಳು ಕಾದು ಕುಳಿತಿದ್ದರು.
ನೀತಿ ಸಂಹಿತೆ ಉಲ್ಲಂಘನೆ
ಇತ್ತ ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಅತ್ತ ದೊಡ್ಡಾಲಹಳ್ಳಿಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಬ್ಬರೂ ಮತಗಟ್ಟೆ ಸನಿಹವೇ ಅಂದರೆ, ನಿಷೇಧಿತ ಪ್ರದೇಶವಾದ ನೂರು ಮೀಟರ್ ವ್ಯಾಪ್ತಿಯಲ್ಲೇ ಸುದ್ದಿಗೋಷ್ಠಿ ನಡೆಸಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮತಗಟ್ಟೆಗೆ ಆಗಮಿಸಿದಾಗ ನಿಷೇಧಿತ ವಲಯದಲ್ಲೂ ಬೆಂಬಲಿಗರ ಪಡೆಯೇ ಬೆನ್ನಿಗಿತ್ತು. ಈ ಅಂಶಗಳ ಕುರಿತು ಸೂಕ್ಷ್ಮ ವೀಕ್ಷಕರು ಈಗಾಗಲೇ ಚುನಾವಣಾಧಿಕಾರಿಗೆ ವರದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತಗಟ್ಟೆಯಲ್ಲೇ ಭೋಜನ
ಚನ್ನಪಟ್ಟಣ ತಾಲೂಕಿನ ಗರಕಹಳ್ಳಿಯ ಮತಗಟ್ಟೆಗೆ ಮಧ್ಯಾಹ್ನ ಊಟದ ವೇಳೆ ಯಾಮೊಬ್ಬ ಮತದಾರರ ಆಗಮನವಾಗಲಿಲ್ಲ. ಈ ಅವಕಾಶವನ್ನು ಬಳಸಿಕೊಂಡ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಸಾಮೂಹಿಕ ಭೋಜನ ಸವಿದರು. ಹಲವೆಡೆ ಮತದಾರರಿಲ್ಲದೆ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದರೆ, ಮತಗಟ್ಟೆ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿ ಆಕಳಿಸಿ ತೂಕಡಿಸುವಂತಾಗಿತ್ತು. ಬಿಡುವಿನ ವೇಳೆ ಪತ್ರಿಕೆ ಓದುತ್ತಾ ಕಾಲ ಕಳೆದಿದ್ದೂ ಕಣ್ಣಿಗೆ ಬಿತ್ತು.
ದೇಗುಲಕ್ಕೆ ದುಡ್ಡು ಬಂತು. ಆದರೆ ಪ್ರಚಾರವಿಲ್ಲ!
ಚನ್ನಪಟ್ಟಣ ತಾಲೂಕಿನ ಚಿಕ್ಕಮಳೂರಿನಲ್ಲಿ ಎರಡು ಪ್ರಮುಖ ಪಕ್ಷಗಳಿಂದ ಮತದಾರರಿಗೆ ಹಂಚಲು ಮತ್ತು ಮತಗಟ್ಟೆ ಹೊರಗಿನ ಖರ್ಚಿಗೆಂದು ಬಂದಿದ್ದ ಪೂರ್ತಿ ಹಣವನ್ನು ದೇಗುಲದ ಅಭಿವೃದ್ಧಿಗೆ ನೀಡಲಾಗಿತ್ತು. ಉಭಯ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೂ ಇಳಿಯಲಿಲ್ಲ. ಮತಗಟ್ಟೆ ಏಜೆಂಟರೂ ಇರಲಿಲ್ಲ.
ಮಳೂರುಪಟ್ಟಣದಲ್ಲಿ 'ಕೈ' ಪರ ಬಿಜೆಪಿ ಪ್ರಚಾರ!
ಉಭಯ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿಯು ಜೆಡಿಎಸ್ ಬೆಂಬಲಿಸಿದೆ. ಆದರೆ, ಚನ್ನಪಟ್ಟಣ ತಾಲೂಕು ಬಿಜೆಪಿ ಅಧ್ಯಕ್ಷ ಪುಟ್ಟಪ್ಪ ತಮ್ಮ ಗ್ರಾಮ ಮಳೂರುಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸುತ್ತಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈ ಕ್ಷೇತ್ರದಲ್ಲಿ ತಟಸ್ಥವಾಗುಳಿದರೆ, ಮುಖಂಡರು ಮಾತ್ರ ಜೆಡಿಎಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಹಂಚಿಹೋಗಿದ್ದರು.
ಸಂಕಲಗೆರೆಯಲ್ಲಿ ಗಲಾಟೆ
ಮತದಾರರಿಗೆ ಹಣ ಹಂಚುವ ವಿಷಯವಾಗಿ ಚನ್ನಪಟ್ಟಣದ ಸಂಕಲಗೆರೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ. ತನ್ನ ಮೇಲೆ ಸಮಾಜವಾದಿ ಪಕ್ಷದಲ್ಲಿದ್ದು ಕಾಂಗ್ರೆಸ್ ಬೆಂಬಲಿಸಿರುವವರು ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ರಾಜು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇದು ಚುನಾವಣೆ ಹೊರತಾದ ವೈಷಮ್ಯದ ಘರ್ಷಣೆ ಎಂದು ಹೇಳಲಾಗುತ್ತಿದೆ.
ಅಭ್ಯರ್ಥಿಗಳ ಪ್ರವಾಸ
ಮತ ಚಲಾವಣೆ ಬಳಿಕ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರಾಮನಗರ ಮತ್ತು ಚನ್ನಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಸ ನಡೆಸಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಮನಗರ, ಮಾಗಡಿ ಮತ್ತು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸಂಚರಿಸಿದರು. ಶಿವಕುಮಾರ್ ಕೂಡ ಕನಕಪುರ, ಬೆಂಗಳೂರು ವ್ಯಾಪ್ತಿಯಲ್ಲಿ ಸುತ್ತಾಡಿದರು.