ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂಗನವಾಡಿಗಳಿಗೆ ಹುಳು ಬಿದ್ದ ದಿನಸಿ ಪೂರೈಕೆ

Rashmi Kasaragodu
Updated On : 2 Dec 2013, 12:44 pm

ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ, ಡಿ.1
ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ದಿನಸಿ ಪದಾರ್ಥಗಳು ಹುಳು ಬಿದ್ದು ಕೊಳೆಯುತ್ತಿವೆ. ಅಂಗನವಾಡಿಯ ಮಕ್ಕಳಿಗೆ ಈ ರೀತಿಯಾಗಿ ಹಾಳಾದ ವಿಷಕಾರಿ ದಿನಸಿಯಲ್ಲೇ ಅಡುಗೆ ಮಾಡಿ ಉಣಿಸಲಾಗುತ್ತಿದೆ. ಇಂತಹದ್ದೊಂದು ಆಘಾತಕಾರಿ ವಿಚಾರ ಸ್ವತಃ ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಕಣ್ಣಿಗೇ ಬಿದ್ದಿದೆ.
ತಾಲೂಕಿನ ಚಿಕ್ಕಬೆಳವಂಗಲ, ದೊಡ್ಡಬೆಳವಂಗಲ ವ್ಯಾಪ್ತಿಯ ವಿವಿಧ ಅಂಗನವಾಡಿಗಳಿಗೆ ದಿಢೀರನೇ ಭೇಟಿ ಕೊಟ್ಟು ಪರಿಶೀಲಿಸಿದ ಅವರಿಗೆ ಸಿಕ್ಕಿದ್ದು ಮುಕ್ಕು ಹುಳುಗಳಿಂದ ತುಂಬಿ ಹಾಳಾಗಿದ್ದ ಗೋಧಿ, ಹುಳುಗಳಿಂದ ತುಂಬಿದ್ದ ಹೆಸರು ಕಾಳು, ಬೂಸ್ಟ್ ಹಿಡಿದು ಹಾಳಾಗಿದ್ದ ಕಡಲೇ ಬೀಜ...ಇತ್ಯಾದಿ. ತಾಲೂಕಿನ ನೂರಾರು ಅಂಗನವಾಡಿಗಳಿಗೆ ಇದೇ ರೀತಿಯ ದಿನಸಿ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿರುವ ತಾಲೂಕು ಪಂಚಾಯಿತಿ ಅಧ್ಯಕ್ಷೆ ನರಸಮ್ಮ ಮತ್ತು ಉಪಾಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಇದಕ್ಕೆ ತಾಲೂಕಿನ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೇ ನೇರ ಹೊಣೆ ಎಂದು ದೂರಿದ್ದಾರೆ.
ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷರ ಕಚೇರಿಯಲ್ಲಿ ಹುಳುಬಿದ್ದ ದಿನಸಿ ಪ್ರದರ್ಶಿಸಿದ ಅವರು, ಹಲವು ಅಂಗನವಾಡಿಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕಣ್ಣಾರೆ ಕಂಡ ಸತ್ಯ ಸಂಗತಿಯನ್ನು ಬಿಚ್ಚಿಟ್ಟರು. ಇಂತಹ ವಿಷಯುಕ್ತ ಮತ್ತು ಹಾಳಾದ ದಿನಸಿ ಪದಾರ್ಥಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಸರ್ಕಾರ ಒಂದೆಡೆ ಪೌಷ್‌ಠಿಕ ಆಹಾರ ಕೊಡಬೇಕು ಎಂದು ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದರೆ ಸರ್ಕಾರವೇ ಪೂರೈಕೆ ಮಾಡುವ ಮತ್ತು ಸರ್ಕಾರದ ಇಲಾಖೆಯ ಮಾರ್ಗದರ್ಶನದಲ್ಲೇ ನಡೆಯುವ ಅಂಗನವಾಡಿಗಳ ಸ್ಥಿತಿ ಈ ರೀತಿಯಾಗಿರುವುದು ದುರಂತ. ಈ ಬಗ್ಗೆ ಸರಿಯಾಗಿ ಮೇಲ್ವಿಚಾರಣೆಯನ್ನೂ ಮಾಡದ ಸಿಡಿಪಿಓ ಇದಕ್ಕೆ ನೇರ ಹೊಣೆ ಎಂದು ಆರೋಪಿಸಿದರು.
ಗೋದಾಮಿಗೆ ಭೇಟಿ: ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ ರೆಡ್ಡಿ ನೇತೃತ್ವದಲ್ಲಿ ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಅಂಗನವಾಡಿ ದಿನಸಿ ಧಾನ್ಯಗಳ ಪೂರೈಕೆ ಗೋದಾಮಿಗೆ ಭೇಟಿ ನೀಡಿ ಧಾನ್ಯ ಸಂಗ್ರಹದ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲಾಯಿತು. ಅಲ್ಲೂ ಕೂಡ ಹಾಳಾಗಿರುವ ಮತ್ತು ಕಡಿಮೆ ಗುಣಮಟ್ಟದ ಗೋಧಿ, ಬೆಲ್ಲ ಇತ್ಯಾದಿ ಕಂಡು ಬಂತು. ಸಮರ್ಪಕ ನಿರ್ವಹಣೆ ಇಲ್ಲದಿರುವ ಕುರಿತು ಸಹ ಸಾಕಷ್ಟು ದೂರುಗಳು ಕೇಳಿಬಂದವು. ನಂತರ ತಾ.ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಗೋದಾಮಿನ ಸಮಗ್ರ ದಿನಸಿ ಪೂರೈಕೆ, ಸರಬರಾಜು ಮಾಹಿತಿ ನೀಡುವಂತೆ ಸಿಡಿಪಿಓ ಜಯದೇವಿ ಅವರಿಗೆ ಸೂಚಿಸಿದರು.
ಸಿಡಿಪಿಓ ಸ್ಪಷ್ಟನೆ: ಈ ಕುರಿತು ಸ್ಪಷ್ಟನೆ ನೀಡಿದ ಸಿಡಿಪಿಓ ಜಯದೇವಿ, ಕಳೆದ ಅಕ್ಟೋಬರ್ ತಿಂಗಳಲ್ಲಿ ನಮಗೆ ಅಗತ್ಯವಿದ್ದ 1600ಕೆಜಿ ಕಡಲೇಬೀಜಕ್ಕೆ ಬದಲಾಗಿ ಪೂರೈಕೆದಾರರು 2550 ಕೆಜಿ ಕಡಲೇಬೀಜ ಪೂರೈಕೆ ಮಾಡಿದ್ದರು. ಹೆಚ್ಚುವರಿ ಧಾನ್ಯವನ್ನು ನಾವು ಹಿಂತಿರುಗಿಸಲಿಲ್ಲ. ಈ ಬಗ್ಗೆ ಇನ್ನೂ ಬಿಲ್ ಕೂಡ ಪಾವತಿ ಮಾಡಿಲ್ಲ. ಹೆಚ್ಚು ದಿನ ಆಗಿರುವುದರಿಂದ ಧಾನ್ಯ ಹಾಳಾಗಿರಬಹುದು ಎಂಬ ಹಾರಿಕೆ ಉತ್ತರ ಕೊಟ್ಟರು. ಅದೇ ರೀತಿ ಕೆಲ ಅಂಗನವಾಡಿಗಳಲ್ಲಿ ಆಹಾರವನ್ನೇ ಮಕ್ಕಳಿಗೆ ಕೊಡುತ್ತಿಲ್ಲ ಎಂಬ ಬಗ್ಗೆಯೂ ದೂರುಗಳಿವೆ. ಈ ಬಗ್ಗೆ ಕೂಡ ಅನೇಕ ಬಾರಿ ಎಚ್ಚರಿಕೆ ನೀಡಿದ್ದೇನೆ. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ಪೂರೈಕೆಯಾಗುವ ಗೋಧಿಯೇ ಇಂತಹುದು. ಅದು ಸರ್ಕಾರದ ಮೂಲಕವೇ ಪೂರೈಕೆಯಾಗುತ್ತಿದೆ. ನಾವು ಬೇರೆಲ್ಲೂ ಖರೀದಿಸುತ್ತಿಲ್ಲ. ದಿನಸಿ ಹಾಳಾಗುತ್ತದೆ ಎಂದು ನಮ್ಮ ವಾಹನದಲ್ಲೇ ಅಂಗನವಾಡಿಗಳಿಗೆ ಪೂರೈಕೆ ಮಾಡಿದ್ದೇವೆ ಅಷ್ಟೇ ಎಂಬ ಅಸ್ಪಷ್ಟ ಉತ್ತರಗಳ ಸ್ಪಷ್ಟನೆ ನೀಡಿದರು.
ತನಿಖೆಯಾಗಲಿ: ಈ ಕುರಿತು ಸಮಗ್ರ ತನಿಖೆಯಾಗಲಿ. ಆಹಾರ ಧಾನ್ಯಗಳ ಗುಣಮಟ್ಟ ತಿಳಿಯಲು ಅದರ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ವರದಿ ಬಂದ ನಂತರ ಸಿಡಿಪಿಓ ಈ ಬಗ್ಗೆ ಸಮಗ್ರ ವಿವರಣೆ ನೀಡಬೇಕು. ಈ ಬಗ್ಗೆ ದಿನೇ ದಿನೇ ದೂರುಗಳೂ ಹೆಚ್ಚುತ್ತಿವೆ. ಅಧಿಕಾರಿಗಳು ಗಂಭೀರವಾಗಿ ಪ್ರಕರಣ ತೆಗೆದುಕೊಳ್ಳಬೇಕು. ಮಕ್ಕಳಿಗೆ ನೀಡುವ ಆಹಾರದಲ್ಲೂ ಈ ಬಗೆಯ ನಿರ್ಲಕ್ಷ್ಯ ಸಲ್ಲದು ಎಂದು ತಾ.ಪಂ ಉಪಾಧ್ಯಕ್ಷ ಕೆ.ಮುನಿಯಪ್ಪ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement