ಕುಸ್ತಿಗೆ ಸಂಘ ಸಂಸ್ಥೆಗಳ ಉತ್ತೇಜನ ಅಗತ್ಯ
ಕನಕಪುರ: ಭಾರತೀಯ ಪ್ರಾಚೀನ ಪ್ರದರ್ಶನ ಕಲಾಪ್ರಕಾರಗಳಲ್ಲಿ ಒಂದಾಗ ಕುಸ್ತಿ ಕಣ್ಮರೆಯಾಗುತ್ತಿದೆ. ಕುಸ್ತಿ ಹಾಗೂ ಗರಡೀ ಪರಂಪರೆಗಳನ್ನು ಉಳಿಸಲು ಸಾರ್ವಜನಿಕರ ಮತ್ತು ಸಂಘಸಂಸ್ಥೆಗಳ ಉತ್ತೇಜನ ಅಗತ್ಯ ಎಂದು ಆರಕ್ಷಕ ವೃತ್ತನಿರೀಕ್ಷಕ ಸಿದ್ದೇಗೌಡ ಹೇಳಿದ್ದಾರೆ.
ಅವರು ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಎವರ್ಗ್ರೀನ್ ಸ್ಪೋರ್ಟ್ಸ್ ಮತ್ತು ಆಟೋಚಾಲಕರ ಸಂಘದ 10ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕುಸ್ತಿಪಂದ್ಯಾವಳಿಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ನಾರಾಯಣಪುರ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪೈಲ್ವಾನ್ ಉಸ್ತಾದ್ ವೆಂಕಟರಮಣ ರೆಡ್ಡಿಯವರು ಕುಸ್ತಿ ಸ್ಪರ್ಧಾಕಣ (ಗೋದಾ) ಪೂಜೆ ನೆರವೇರಿಸಿದರು. ಕುಸ್ತಿ ಪಂದ್ಯಾವಳಿಗಳ ವಿವಿಧ ವಿಭಾಗಗಳಲ್ಲಿ 50 ಮಂದಿ ಪೈಲ್ವಾನರುಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಜೀತ ಕುಸ್ತಿಪಟುಗಳಿಗೆ ಆಕರ್ಷಕ ಬಹುಮಾನ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸ್ಟುಡಿಯೋ ಚಂದ್ರು, ಪುರಸಭಾ ಸದಸ್ಯ ಬ್ಲಾಡುರವಿ, ಜಯರಾಮು, ಬಸವರಾಜು, ಚೇತನ್, ಮೀಸೆಕೃಷ್ಣಪ್ಪ, ಪೈ.ಶಿವರಾಜು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕ ಡಿ.ಎಸ್. ಸತೀಶ್ ಕಾರ್ಯಕ್ರಮ ನಿರೂಪಿಸಿದರು.