ರಸ್ತೆಗಳ ವಿಸ್ತರಣೆ ಆಕ್ಷೇಪಣೆಗೆ ಗಡುವು
ಹೊಸಕೋಟೆ: ಪಟ್ಟಣದ ಕೆಲವು ರಸ್ತೆಗಳು ವಿಸ್ತರಣೆಗೆ ಯೋಜನಾ ಪ್ರಾಧಿಕಾರ ನಕ್ಷೆ ತಯಾರಿಸಿದ್ದು ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.7 ಕಡೇ ದಿನವಾಗಿದೆ. ಪಟ್ಟಣದ ಜನಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು ವಾಹನಗಳ ಸಂಚಾರ ಸಹ ಅಧಿಕಗೊಳ್ಳುತ್ತಿದೆ.ಇದರಿಂದಾಗಿ ಹಾಲಿ ರಸ್ತೆಗಳನ್ನು ವಿಸ್ತರಿಸುವುದು ಅನಿವಾರ್ಯ ಎಂಬುದು ಯೋಜನಾ ಪ್ರಾಧಿಕಾರದ ಅಧಿಕಾರಿಗಳ ಪ್ರಸ್ತಾಪನೆಯಾಗಿದೆ. ರಾ.ಹೆ.207ರಿಂದ ರಾ.ಹೆ.4ನ್ನು ಸಂಪರ್ಕಿಸಲು 150 ಅಡಿಗಳ ವರ್ತುಲ ರಸ್ತೆ ಚಿಕ್ಕಕೆರೆ ಮೂಲಕ ಹಾದು ಹೋಗುವುದರಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ವಿಸ್ತರಣೆಗೆ ಸೂಚಿಸಲು ಮತ್ತೊಂದು ಕಾರಣವಾಗಿದೆ.ಚಿಕ್ಕಕೆರೆಯಿಂದ ಬ್ರಾಹ್ಮಣರ ಬೀದಿ, ಮಾರ್ಕೆಟ್ ರಸ್ತೆ, ಕುರುಬರಪೇಟೆ, ಬೆಸ್ತರಪೇಟೆ ಮೂಲಕ ರಾ.ಹೆ.4ಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಸ್ತುತ ಇರುವ ರಸ್ತೆಯನ್ನು ಎರಡೂ ಬದಿಯಲ್ಲೂ ತಲಾ ಆರು ಮೀ.ಗಳಷ್ಟು ವಿಸ್ತರಿಸಲು ಸೂಚಿಸಲಾಗಿದೆ.
ಇದರಿಂದಾಗಿ ಹಳೆ ಪಟ್ಟಣದ ಪ್ರಾಚೀನ ದೇವಾಲಯಗಳು, ಸ್ಮಾರಕಗಳು ಕಣ್ಮರೆಯಾಗುವ ಭೀತಿಯಿದೆ. ಈ ರಸ್ತೆಯಲ್ಲಿ ರಾಘವೇಂದ್ರಸ್ವಾಮಿ, ಸಾಯಿಬಾಬಾ, ನಗರೇಶ್ವರ, ವಿನಾಯಕ, ದೊಡ್ಡಮಾರಮ್ಮ ದೇವಾಲಯಗಳಿದ್ದು ಚಿಕ್ಕಕೆರೆ ಬಳಿ ಕರಗ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಪೂಜೆ ಸಲ್ಲಿಸಲು ಏಳು ಸುತ್ತಿನ ಕೋಟೆ ಸಹ ನಿರ್ಮಿಸಲಾಗಿದೆ. ಹಳೆಯ ಪಟ್ಟಣದ, ಮಾರ್ಕೆಟ್ ರಸ್ತೆಯಲ್ಲಿ ವಾಸದ ಮನೆಗಳಿಗಿಂತಲೂ 10 ರಿಂದ 20 ಅಡಿ ಅಳತೆಯುಳ್ಳ ಅಂಗಡಿಗಳಿದ್ದು ಸಣ್ಣ ವ್ಯಾಪಾರಿಗಳೇ ಹೆಚ್ಚಾಗಿದ್ದು ಜೀವನೋಪಾಯಕ್ಕೆ ವ್ಯಾಪಾರವನ್ನೆ ನೆಚ್ಚಿಕೊಂಡಿದ್ದಾರೆ. ತಾವು ಹೊಂದಿರುವ ಏಕೈಕ ಆಸ್ತಿ ಕಳೆದುಕೊಂಡು ನಿರುದ್ಯೋಗಿಗಳಾಗುವ ಪರಿಸ್ಥಿತಿ ಸಹ ನಿರ್ಮಾಣಗೊಂಡು ಬಹಳಷ್ಟು ಕುಟುಂಬಗಳು ಬೀದಿಪಾಲಾಗಲಿವೆ.
205 ಆಕ್ಷೇಪಣೆ ಸಲ್ಲಿಕೆ: ರಸ್ತೆ ವಿಸ್ತರಣೆ ಬಗ್ಗೆ ಯೋಜನಾ ಪ್ರಾಧಿಕಾರಕ್ಕೆ ಇದುವರೆಗೂ 205 ಆಕ್ಷೇಪಣೆಗಳನ್ನು ಸಲ್ಲಿಸಲಾಗಿದ್ದು ರಸ್ತೆ ವಿಸ್ತರಣೆ ಬದಲಿಗೆ ಪ್ರಮುಖ ರಸ್ತೆಗಳನ್ನು ಏಕಮುಖ ಸಂಚಾರವನ್ನಾಗಿ ಪರಿವರ್ತಿಸಬೇಕು. ಹಾಗೇನಾದರೂ ರಸ್ತೆ ವಿಸ್ತರಣೆ ಅನಿವಾರ್ಯವಾದಲ್ಲಿ ಹಾನಿಗೊಳಗಾಗುವವರಿ ಗೆ ನಿಗದಿತ ಪರಿಹಾರ ನೀಡುವುದರೊಂದಿಗೆ ಪರ್ಯಾಯ ಉದ್ಯೋಗ,ವಸತಿ ಕಲ್ಪಿಸಿಕೊಡಬೇಕು. ಅಲ್ಲದೆ, ಧಾರ್ಮಿಕ ಆಚರಣೆಗೆ ಮತ್ತು ದೇವಾಲಯಗಳ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡಬೇಕು ಎಂಬುದು ಆಕ್ಷೇಪಣೆಗಳ ಪ್ರಮುಖ ಅಂಶಗಳಾಗಿವೆ. ರಸ್ತೆ ವಿಸ್ತರಣೆಯಿಂದ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾಗಿ ಜನರ ನೆಮ್ಮದಿಯ ಜೀವನಕ್ಕೆ ಭಂಗ ಉಂಟಾಗುವ ಸಂಭವವೂ ಇದೆ.
ನೆಮ್ಮದಿ ಕೆಡಿಸಿದೆ
ಸುಮಾರು 25 ವರ್ಷಗಳ ಹಿಂದೆ ಸೂಲಿಬೆಲೆ ರಸ್ತೆಯಿಂದ ಗಾಣಿಗರಪೇಟೆ ಮೂಲಕ ರಾ.ಹೆ.4ನ್ನು ಸಂಪರ್ಕಿಸುವ ಮುಖ್ಯರಸ್ತೆಯನ್ನು ಅಗಲ ಮಾಡಲು ಉದ್ದೇಶಿಸಿ ಕಟ್ಟಡಗಳನ್ನು ಸಹ ಗುರುತಿಸಲಾಗಿತ್ತು. ಸಮಸ್ಯೆಯ ಗಂಭೀರತೆ ಅರಿತ ಜನಪ್ರತಿನಿಧಿಗಳು ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವಶದಿಂದ ಪುರಸಭೆಗೆ ವಹಿಸಿಕೊಳ್ಳಲಾಗಿತ್ತು. ರಸ್ತೆ ವಿಸ್ತರಣೆಯ ಭೂತ ಮತ್ತೊಮ್ಮೆ ಪ್ರತ್ಯಕ್ಷಗೊಂಡು ಜನರ ನೆಮ್ಮದಿ ಕೆಡಿಸಿದೆ. ಪ್ರಸ್ತಾವನೆಗೆ ಅರ್ಜಿ ಸಲ್ಲಿಸಿರುವ ಬಹುತೇಕ ಜನರು ಯೋಜನಾ ಪ್ರಾಧಿಕಾರ ಸೂಕ್ತ ಬದಲಾವಣೆ ಮಾಡದಿದ್ದಲ್ಲಿ ಸಂಘಟಿತಗೊಂಡು ಪ್ರತಿಭಟನೆ ಸಹ ನಡೆಸಲು ಸಜ್ಜಾಗಿದ್ದಾರೆ.